ಉಡುಪಿ, ಅ.6: ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾ ಬಿಜೆಪಿ ರೈತ ಮೋರ್ಚಾದೊಂದಿಗೆ ಬಿಜೆಪಿಯ ಎಲ್ಲಾ ಮೋರ್ಚಾಗಳು ಒಂದು ತಂಡವಾಗಿ ಅಹೋರಾತ್ರಿ ಶ್ರಮಿಸಲು ಸಿದ್ಧವಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತ ದೇಶಕ್ಕೆ ಅನ್ನ ನೀಡುವ ಶ್ರಮಜೀವಿಯಾಗಿದ್ದು, ಸರ್ಕಾರದ ಹಲವು ನೀತಿಗಳು ರೈತರ ಪಾಲಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಪ್ರತಿಯೊಬ್ಬ ರೈತರ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪಟ್ಟಿಯನ್ನು ಸಿದ್ಧಪಡಿಸಿ, ರೈತರನ್ನು ಒಗ್ಗೂಡಿಸಿ, ಬಿಜೆಪಿ ನೀತಿ ಹಾಗೂ ಕಾನೂನಿನ ಚೌಕಟ್ಟಿನೊಳಗೆ ನ್ಯಾಯ ಒದಗಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ರೈತ ಪರ, ಕಾರ್ಮಿಕರ ಪರ, ದೇಶದ ಪರ ಹಾಗೂ ಪಕ್ಷದ ಪರ ಕೆಲಸ ಮಾಡಿದ ತೃಪ್ತಿ ನಮ್ಮದಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮೋರ್ಚಾಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ, ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯಕ್, ಜಿಲ್ಲಾ ರೈತ ಮೋರ್ಚಾ ಉಸ್ತುವಾರಿ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು.
ಪುಷ್ಪರಾಜ್ ಸ್ವಾಗತಿಸಿದರು. ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮ್ ಪ್ರಸಾದ್ ವಂದಿಸಿದರು. ಜಿಲ್ಲಾ ರೈತ ಮೋರ್ಚಾದ ಎಲ್ಲ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ರೈತಪರ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಅನ್ನದಾತನ ಸಮಸ್ಯೆಗಳಿಗೆ ಬಿಜೆಪಿ ಎಲ್ಲಾ ಮೋರ್ಚಾಗಳು ಒಗ್ಗಟ್ಟಾಗಿ ಶ್ರಮಿಸಲಿ: ಕುತ್ಯಾರು ನವೀನ್ ಶೆಟ್ಟಿ
RELATED ARTICLES

