HomeFresh Newsಮನುಷ್ಯ ಉಳಿಯಬೇಕಾದರೆ ಜೇನು ಉಳಿಸಿ, ವೃದ್ಧಿಸಿ – ಕ್ಷಮಾ ಪಾಟೀಲ್

ಮನುಷ್ಯ ಉಳಿಯಬೇಕಾದರೆ ಜೇನು ಉಳಿಸಿ, ವೃದ್ಧಿಸಿ – ಕ್ಷಮಾ ಪಾಟೀಲ್

ಉಡುಪಿ, ಅ. 7: “ಮನುಷ್ಯ ಉಳಿಯಬೇಕಾದರೆ ಜೇನುನೊಣಗಳನ್ನು ಉಳಿಸಿ, ವೃದ್ಧಿಸಬೇಕು. ಇಲ್ಲವಾದಲ್ಲಿ ಗಂಡಾಂತರ ಖಂಡಿತ ಕಟ್ಟಿಟ್ಟ ಬುತ್ತಿ” ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್ ಎಚ್ಚರಿಕೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ ಮಧುವನ ಮತ್ತು ಜೇನು ಸಾಕಾಣಿಕೆ ಯೋಜನೆಯಡಿ ರೈತರಿಗೆ ಆಯೋಜಿಸಲಾಗಿದ್ದ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೇನು ಸಾಕಾಣಿಕೆ ಅತ್ಯಂತ ಲಾಭದಾಯಕ ಕೃಷಿ ಚಟುವಟಿಕೆಯಾಗಿದ್ದು, ಆಹಾರ ಉತ್ಪಾದನೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಜೇನುನೊಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೇನು ಕೃಷಿಗೆ ಇರುವ ಅವಕಾಶಗಳು, ಸರ್ಕಾರ ರೈತರ ಅಭಿವೃದ್ಧಿಗಾಗಿ ರೂಪಿಸಿರುವ ರೈತಪರ ಯೋಜನೆಗಳು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು.
“ಜೇನು ಕೃಷಿಯಲ್ಲಿ ಆಸಕ್ತಿ ಹಾಗೂ ಶ್ರಮ ವಹಿಸುವ ರೈತರ ಏಳಿಗೆಗಾಗಿ ತೋಟಗಾರಿಕೆ ಇಲಾಖೆ ಸದಾ ಕಾರ್ಯನಿರ್ವಹಿಸುತ್ತಿದೆ. ರೈತರು ಸರ್ಕಾರದ ಯೋಜನೆಗಳು ಹಾಗೂ ತರಬೇತಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕ್ಷಮಾ ಪಾಟೀಲ್ ಸಲಹೆ ನೀಡಿದರು.
ಉಡುಪಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ.) ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಉಪೇಂದ್ರ ನಾಯಕ್
ಹಾಗೂ ನಿವೃತ್ತ ಜೇನು ಕೃಷಿ ಪ್ರದರ್ಶಕ ಲಕ್ಷ್ಮಣ ನಾಯ್ಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾಪು, ಬ್ರಹ್ಮಾವರ ಹಾಗೂ ಉಡುಪಿ ತಾಲೂಕು ವ್ಯಾಪ್ತಿಯ ರೈತ ಬಾಂಧವರಿಗೆ ಇಲಾಖೆಯ ವತಿಯಿಂದ ಜೇನು ಕೃಷಿ ತರಬೇತಿ ನೀಡಲಾಯಿತು. ಸುಮಾರು 50 ಮಂದಿ ರೈತರು ತರಬೇತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿ.ಪಂ.) ಉಡುಪಿ ಶ್ರೀ ಎಲ್. ಹೇಮಂತ ಕುಮಾರ್ ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments