ಮೂಡುಬಿದಿರೆ : ರಾಜ್ಯದ ಖ್ಯಾತ ಗಾಯಕ, ಮೂಡುಬಿದಿರೆಯವರಾದ ವಿದ್ವಾನ್ ಯಶವಂತ ಎಂ.ಜಿ ಅವರು ಭಾರತದ ಏಕತೆ, ಅಖಂಡತೆ, ಭಾಷಾ ವೈವಿಧ್ಯತೆಯನ್ನು ಸಾರುವ ನಿಟ್ಟಿನಲ್ಲಿ 28 ರಾಜ್ಯಗಳ, 28ಭಾಷೆಗಳ ಹಾಡುಗಳನ್ನು ನಿರಂತರ 28 ಗಂಟೆಗಳ ಕಾಲ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಡಾ.ರಾಜ್ ಕುಮಾರ್ ಆಡಿಟೋರಿಯಂನಲ್ಲಿ ಅ.೨೮ ರಂದು ಮಧ್ಯಾಹ್ನ ೧ ಗಂಟೆಗೆ ಹಿನ್ನೆಲೆ ಗಾಯನದೊಂದಿಗೆ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನೊಂದಿಗೆ ಗಾಯನ ಆರಂಭಿಸಿದ ಯಶವಂತ್ ಅವರು ಅ.೨೯ ರಂದು ಸಂಜೆ ೫ ಗಂಟೆಯವರೆಗೆ ನಿರಂತರ ೨೮ ಗಂಟೆಗಳ ಕಾಲ ಹಾಡುವ ಮೂಲಕ ಈ ದಾಖಲೆ ನಿರ್ಮಿಸಿದರು.
ಕಳೆದ ವರ್ಷ ಜೂನ್ 3 ಮತ್ತು 4 ರಂದು ಮಂಗಳೂರು ಪುರಭವನದಲ್ಲಿ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಪ್ರಯುಕ್ತ ಅವರು ಹಾಡಿದ ಹಾಡುಗಳನ್ನು ನಿರಂತರ ೨೪ ಗಂಟೆಗಳ ಕಾಲ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದು ಮತ್ತೆ ೨೮ ಗಂಟೆಗಳ ಕಾಲ ಹಾಡುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಅವರೊಂದಿಗೆ ಹಿನ್ನೆಲೆ ಸಂಗೀತದಲ್ಲಿ ರಾಜಗೋಪಾಲ ಆಚಾರ್ಯ (ಗಿಟಾರ್) ವಾಮನ್(ರಿದಂ ಪ್ಯಾಡ್) ಪ್ರಜ್ವಲ್ ಆಚಾರ್ಯ, ದೀಕ್ಷಿತ್ ಕೊಡಂಚ (ತಬಲ) ವರ್ಷಾ ಆಚಾರ್ಯ, ಗಣೇಶ್ (ಕೊಳಲು) ಸುಮುಖ್ ಆಚಾರ್ಯ (ಸಿತಾರ್) ಮೆಲ್ವಿನ್ (ಕೀ ಬೋರ್ಡ್) ನಲ್ಲಿ ಸಹಕರಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಷ್ಣೊಯಿ ಪ್ರಮಾಣ ಪತ್ರವನ್ನು ಯಶವಂತ್ ಅವರಿಗೆ ಹಸ್ತಾಂತರಿಸಿದರು.
ಮಹಾಲಕ್ಷ್ಮೀಪುರಂ ಶಾಸಕ ಗೋಪಾಲಯ್ಯ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಕಾರ್‍ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ನೂರುರು ಮಂದಿ ಸಂಗೀತಾಭಿಮಾನಿಗಳು ಉಪಸ್ಥಿತರಿದ್ದರು.

