ಮಂಗಳೂರು, ಅಕ್ಟೋಬರ್ 29: “ಕೆಂಪು ಎಂದರೆ ನಿಲ್ಲಿ, ಹಳದಿ ಎಂದರೆ ಎಚ್ಚರದಿಂದಿರಿ ಮತ್ತು ಹಸಿರು ಎಂದರೆ ಸುರಕ್ಷಿತವಾಗಿ ಮುನ್ನಡೆಯಿರಿ!” – ಈ ಸಂದೇಶದೊಂದಿಗೆ ಇಲ್ಲಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ “ಮೂರು ದೀಪಗಳ ಶಕ್ತಿ” (The Power of Three Lights) ಎಂಬ ಪರಿಕಲ್ಪನೆಯಡಿ ಅರ್ಥಪೂರ್ಣ ‘ಬ್ಯಾಗ್ ಲೆಸ್ ಡೇ’ – ‘ಲಿಟಲ್ ಗೊನ್ಝಾಗೈಟ್ಸ್ ಫನ್ ಫಿಯೆಸ್ಟಾ’ ಕಿಂಡರ್ ಗಾರ್ಡನ್ ಪುಟಾಣಿಗಳಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಭಾಂಗಣದಲ್ಲಿ ಕಾರು, ಬಸ್, ಆಟೋ, ಸೈಕಲ್ ಮುಂತಾದ ವಾಹನಗಳ ಆಕರ್ಷಕ ಕಟೌಟ್ಗಳನ್ನು ಧರಿಸಿದ್ದ ಪುಟಾಣಿಗಳು ರಸ್ತೆ ಸಂಚಾರದ ವಾತಾವರಣವನ್ನು ಸೃಷ್ಟಿಸಿದರು. ವರ್ಣರಂಜಿತ ಉಡುಪುಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದ ಮಕ್ಕಳು ರಸ್ತೆ ಸುರಕ್ಷತಾ ರಾಯಭಾರಿಗಳಂತೆ ಮೆರವಣಿಗೆ ನಡೆಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ’ಅಲ್ಮೇಡಾ ಎಸ್.ಜೆ., “ಟ್ರಾಫಿಕ್ ದೀಪಗಳು ರಸ್ತೆಯಲ್ಲಿ ಮೌನ ರಕ್ಷಕರಂತೆ ಕಾರ್ಯನಿರ್ವಹಿಸುತ್ತವೆ ಜನರು ಜಾಗರೂಕರಾಗಿ ಚಲಿಸಿ, ಸುರಕ್ಷಿತವಾಗಿ ತಲುಪಲು ಇವು ಮಾರ್ಗದರ್ಶನ ನೀಡುತ್ತವೆ. ಪ್ರತಿಯೊಬ್ಬರೂ ಬಾಲ್ಯದಿಂದಲೇ ಸಂಚಾರ ನಿಯಮಗಳನ್ನು ಪಾಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಕುರಿತ ಆಟಗಳು, ಝುಂಬಾ, ಹಾಡುಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳು ನಡೆದವು. ಪುಟಾಣಿ ಗೊನ್ಝಾಗೈಟ್ಸ್ ಗಳು ಕೆಂಪು ದೀಪ ಬಂದಾಗ ನಿಲ್ಲುವುದು, ಹಳದಿ ದೀಪ ಬಂದಾಗ ಎಚ್ಚರಿಕೆಯಿಂದಿರುವುದು ಹಾಗೂ ಹಸಿರು ದೀಪ ಬಂದಾಗ ಸುರಕ್ಷಿತವಾಗಿ ಮುಂದೆ ಸಾಗುವುದನ್ನು ಉತ್ಸಾಹದಿಂದ ಅಭ್ಯಾಸ ಮಾಡುವ ಮೂಲಕ ರಸ್ತೆ ಸುರಕ್ಷತೆಯ ಮಹತ್ವವನ್ನು ತಿಳಿದುಕೊಂಡರು.”ಸುರಕ್ಷಿತ ರಸ್ತೆ ಸಂಚಾರವು ಜಾಗೃತಿ ಮತ್ತು ಜವಾಬ್ದಾರಿಯುತ ನಿರ್ಧಾರಗಳಿಂದ ಸಾಧ್ಯ” ಎಂಬ ಜಾಗೃತಿ ಸಂದೇಶದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

