ಕಾಪು: ಕಾಲನಿರ್ಣಯ, ಪಂಚಾಂಗ ತಯಾರಿಕೆ ಹಾಗೂ ನಾಡಿವಿದ್ಯೆ ಸೇರಿದಂತೆ ಹಲವು ಪುರಾತನ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಋಷಿಮುನಿಗಳು ತಪಸ್ಸು ಆಚರಿಸುತ್ತಿದ್ದರೆಂದು ಪ್ರತೀತಿ ಹೊಂದಿರುವ, ಐತಿಹಾಸಿಕ ಅಡ್ವೆ ನಂದಿಕೂರಿನ ನಿನ್ನಿಕಲ್ಲು ಪಾದೆಯಲ್ಲಿ 1,008 ದೀಪಗಳನ್ನು ಬೆಳಗಿಸುವ ಮೂಲಕ ಬಲಿಪರ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ತುಳುವ ಮಹಾಸಭೆಯ ಕಾಪು ವಲಯ ಸಮಿತಿಯ ನೇತೃತ್ವದಲ್ಲಿ ಹಾಗೂ ಅಡ್ವೆ ನಂದಿಕೂರು ಗ್ರಾಮದ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾದ ದೀಪೋತ್ಸವದಲ್ಲಿ 1,008 ಹಣತೆಗಳ ಬೆಳಕಿನಿಂದ ಐತಿಹಾಸಿಕ ನಿನ್ನಿಕಲ್ಲು ಪಾದೆ ಕಂಗೊಳಿಸಿತು. ದೀಪಗಳ ಸಾಲು ಪುರಾತನ ಕ್ಷೇತ್ರದ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹಾಗೂ ಹಿರಿಯ ಜಾನಪದ ಕಲಾವಿದ, ದೈವ ನರ್ತಕ ಬಾಲಕೃಷ್ಣ ಕತ್ತಲ್ಸಾರ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ‘ಬಲಿಂದ್ರ ಲೆಪ್ಪು’ ನೀಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಬಳಿಕ ಮಾತನಾಡಿದ ದಯಾನಂದ ಜಿ. ಕತ್ತಲ್ಸಾರ್ ಅವರು, ದೀಪಾವಳಿ ಬೆಳಕಿನ ಹಬ್ಬದ ಮಹತ್ವ, ತುಳುನಾಡಿನ ಸಾಂಸ್ಕೃತಿಕ ಪರಂಪರೆ ಹಾಗೂ ಆಚರಣೆಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸಿದರು.

ಬಲಿಚಕ್ರವರ್ತಿಯ ಕಾಲವು ಕಪಟ, ವಂಚನೆ ಹಾಗೂ ಜಾತಿಭೇದಗಳಿಲ್ಲದ ಸತ್ಯದ ಯುಗವಾಗಿತ್ತು. ‘ನಿನ್ನಿ’ ಎಂದರೆ ಸತ್ಯ ಎಂಬ ಅರ್ಥವಿದೆ. ನಿನ್ನಿಕಲ್ಲು ಪಾದೆಯ ಈ ಸತ್ಯದ ನೆಲದಲ್ಲಿ ಅರಳಿದ ಬೆಳಕು ಬಲಿಚಕ್ರವರ್ತಿಯ ಹೊಸ ತುಳು ರಾಜ್ಯದ ಪುನರುತ್ಥಾನಕ್ಕೆ ಪ್ರೇರಣೆಯಾಗಲಿ. ಬಲಿಯಂದ್ರನ ತುಳು ರಾಜ್ಯ ಮರಳಿ ಬರಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರಿಗೆ ಪಾನಕ, ಪಂಚಕಜ್ಜಾಯ ಹಾಗೂ ಉಪಹಾರ ವಿತರಿಸಲಾಯಿತು.
ಸಮಾರಂಭದಲ್ಲಿ ತುಳುವರ್ಲ್ಡ್ ಫೌಂಡೇಶನ್ನ ನಿರ್ದೇಶಕ ರಾಜೇಶ್ ಆಳ್ವ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ಕಾರ್ಯದರ್ಶಿ ಮನೋಹರ್ ರೈ, ತುಳುವ ಮಹಾಸಭೆಯ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ, ನಿನ್ನಿಕಲ್ಲು ಪಾದೆ ಪುನಶ್ಚೇತನ ಸಮಿತಿಯ ಪ್ರಧಾನ ಸಂಚಾಲಕ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ದೊಡ್ಡಮನೆ, ಕಾಪು ತುಳುವ ಮಹಾಸಭೆಯ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ಪ್ರಧಾನ ಸಂಚಾಲಕ ವಿಕ್ಕಿ ಪೂಜಾರಿ ಮಡುಂಬು, ಪುನೀತ್ (ತುಳುನಾಡು ವಾರ್ತೆ), ಮಹಿಳಾ ವಿಭಾಗದ ಕಾರ್ಯದರ್ಶಿ ಶ್ವೇತಾ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ದೀಕ್ಷಾ ಶೆಟ್ಟಿ, ಸದಸ್ಯರಾದ ಹೇಮಲತಾ ಮತ್ತು ಸುಲೋಚನಾ ಶೆಟ್ಟಿ, ಕೋಟಿ ಚೆನ್ನಯ ಗೆಳೆಯರ ಬಳಗ ಅಡ್ವೆ ನಂದಿಕೂರಿನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


