HomeFresh Newsಸೇವೆಯ ಆತ್ಮೀಯತೆ, ಜನರ ವಿಶ್ವಾಸವೇ ಸಹಕಾರ ರಂಗದ ಬಲ: ಕಾರ್ತಿಕ್ ಕುಮಾರ್

ಸೇವೆಯ ಆತ್ಮೀಯತೆ, ಜನರ ವಿಶ್ವಾಸವೇ ಸಹಕಾರ ರಂಗದ ಬಲ: ಕಾರ್ತಿಕ್ ಕುಮಾರ್

ಉಡುಪಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಸಹಕಾರಿ ಸಂಸ್ಥೆಗಳು ತಮ್ಮ ವಿಶಿಷ್ಟ ಸೇವಾ ಮಾದರಿ, ಸ್ಥಳೀಯ ಭಾಷೆಯ ಸಂವಹನ ಮತ್ತು ಗ್ರಾಹಕರೊಂದಿಗಿನ ಆತ್ಮೀಯ ಸಂಬಂಧದ ಮೂಲಕ ಜನರ ವಿಶ್ವಾಸವನ್ನು ಗಳಿಸುತ್ತಿವೆ. ಇದೇ ವಿಶ್ವಾಸ ಸಹಕಾರ ರಂಗದ ಬಲವಾಗಿದ್ದು, ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಭದ್ರ ಅಡಿಪಾಯವಾಗಿದೆ ಎಂದು ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ಕುಮಾರ್ ಹೇಳಿದರು.
ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಉಡುಪಿ ಶಾಖೆಯಲ್ಲಿ ಸಹಕಾರ ಸಪ್ತಾಹ 2026ರ ಅಂಗವಾಗಿ ಹಿರಿಯ ಸಹಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸ್ಪರ್ಧೆ ಎದುರಿಸುತ್ತಿದ್ದರೂ ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸ ಮತ್ತು ಸಿಬ್ಬಂದಿಯ ಆತ್ಮೀಯ ಸೇವೆಯಿಂದ ಮುನ್ನಡೆಯುತ್ತಿವೆ. ಪ್ರಿಯದರ್ಶಿನಿ ಸೊಸೈಟಿಯೂ ಇದೇ ಸೇವಾ ಮನೋಭಾವದೊಂದಿಗೆ ಮುಂದುವರಿದು ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಯುನೈಟೆಡ್ ಸರ್ಜಿಕಲ್ಸ್, ಉಡುಪಿಯ ಮಾಲಕಿ ಪ್ರಿಯಾಂಕ ಶೆಟ್ಟಿ ಮಾತನಾಡಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಸ್ನೇಹಿ ಸೇವೆ ನೀಡುವ ಮೂಲಕ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ ಎಂದು ಶ್ಲಾಘಿಸಿದರು.
ಸಹಕಾರ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಅನುಭವ ಮತ್ತು ಕೊಡುಗೆ ನೀಡಿದ ಹಿರಿಯ ಸಹಕಾರಿಗಳಾದ ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ರಾವ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿವೃತ್ತ ಶಾಖಾ ವ್ಯವಸ್ಥಾಪಕಿ ನಯನ ಆಶಾಮಣಿ ಹಾಗೂ ಉಡುಪಿ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘದ ನಿವೃತ್ತ ಸಿಬ್ಬಂದಿ ಸುಧಾಕರ್ ಡಿ. ಅಮೀನ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಎಚ್. ವಸಂತ್ ಬೆರ್ನಾರ್ಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಪ್ರಬಂಧಕಿ ನಿಶಾ ಸುಹೈಲ್ ಡೇನಿಯಲ್ ಸ್ವಾಗತಿಸಿ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ಸಿಬ್ಬಂದಿಗಳಾದ ರಕ್ಷಿತಾ ಹಾಗೂ ಅಪೇಕ್ಷಾ ಸನ್ಮಾನ ಪತ್ರ ವಾಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments