ಮಸ್ಕತ್: ಬಂಟ್ಸ್ ಓಮನ್ ಸಂಘದ 37ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಹಾಗೂ ವಾರ್ಷಿಕ ಸಮಾರಂಭವು “ಬಂಟ್ಸ್ ಓಮನ್ ಸಿರಿ ಸಿಂಗಾರ 2026” ಎಂಬ ಹೆಸರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬಂಟ್ಸ್ ಓಮನ್ ಸಂಘವು ಪ್ರತಿವರ್ಷವೂ ವಿಭಿನ್ನ ಹೆಸರಿನಡಿ ಸಮಿತಿ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ವಿಶಿಷ್ಟ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈ ವರ್ಷದ ಸಿರಿ ಸಿಂಗಾರ ಕಾರ್ಯಕ್ರಮವು ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಮನರಂಜನೆಯ ಅದ್ದೂರಿ ಸಂಗಮವಾಗಿ ಮೂಡಿಬಂತು.

ಅಕ್ಟೋಬರ್ 23ರಂದು ಶುಕ್ರವಾರ ಅಲ್ ಹೈಲ್ ಕ್ರಿಕೆಟ್ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಪುರುಷರಿಗಾಗಿ ಸಾಫ್ಟ್ಬಾಲ್ ಕ್ರಿಕೆಟ್ ಹಾಗೂ ವಾಲಿಬಾಲ್, ಮಹಿಳೆಯರಿಗಾಗಿ ಬಾಕ್ಸ್ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಭಾಗವಹಿಸಲು ಅವಕಾಶ ಕಲ್ಪಿಸಿರುವುದು ಕ್ರೀಡಾಕೂಟದ ವಿಶೇಷತೆಯಾಯಿತು.
ಕಪ್ಪೆ ಓಟ, ಲಿಂಬೆ-ಚಮಚ ಓಟ, ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗಾಗಿ “ಅಗೋಳಿ ಮಂಜಣ್ಣ ಟ್ರೋಫಿ” ಹಾಗೂ ಮಹಿಳೆಯರಿಗಾಗಿ “ಬಾಲು ಮಾಡಿದಿ ಟ್ರೋಫಿ” ಹಗ್ಗಜಗ್ಗಾಟ ಸ್ಪರ್ಧೆಗಳು ಕ್ರೀಡಾಕೂಟಕ್ಕೆ ಮತ್ತಷ್ಟು ರಂಗು ತುಂಬಿದವು. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ರಿಲೇ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು.
ಬಂಟ್ಸ್ ಓಮನ್ನ ಹಿರಿಯ ಸದಸ್ಯರಿಗಾಗಿ ಮೊದಲ ಬಾರಿಗೆ ಆಯೋಜಿಸಲಾದ “ಸೀನಿಯರ್ಸ್ ಬಾಕ್ಸ್ ಕ್ರಿಕೆಟ್” ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ಗ್ರಾಮೀಣ ಜಾತ್ರೆಗಳಲ್ಲಿ ಕಾಣಸಿಗುವ ರಂಗುಬಣ್ಣದ ರಿಂಗ್ ಆಟ ಹಾಗೂ ಲೋಟ-ಚೆಂಡಿನ ಆಟಗಳನ್ನೂ ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ಬೃಹತ್ ಹವಾ ಸ್ಲೈಡ್ ವ್ಯವಸ್ಥೆ ಮಾಡಲಾಗಿದ್ದು, ಇದು ಪುಟಾಣಿ ಮಕ್ಕಳಲ್ಲಿ ವಿಶೇಷ ಉತ್ಸಾಹ ಮೂಡಿಸಿತು. ಸಂಜೆ ವೇಳೆ ಎಲ್ಲರಿಗೂ ಚರುಮುರಿಯ ಸವಿಯನ್ನು ಉಣಬಡಿಸಲಾಯಿತು.

ರಮೀ ಡ್ರೀಮ್ ರೆಸಾರ್ಟ್ನಲ್ಲಿ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ವಾರ್ಷಿಕ ಸಮಾರಂಭ
ನವೆಂಬರ್ 13ರಂದು ಶುಕ್ರವಾರ ರಮೀ ಡ್ರೀಮ್ ರೆಸಾರ್ಟ್ನಲ್ಲಿ ವಾರ್ಷಿಕ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಭಾಂಗಣದ ಮುಖ್ಯ ದ್ವಾರದಿಂದ ವೇದಿಕೆಯವರೆಗೆ ಸಮಿತಿಯ ಸದಸ್ಯರು ಪೂರ್ಣಕುಂಭದೊಂದಿಗೆ ಆಗಮಿಸಿ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಓಮನ್ ಬಂಟ್ಸ್ ಸಂಘದ ಹಿರಿಯರಾದ ಶ್ರೀ ಶಶಿಧರ್ ಶೆಟ್ಟಿ ಮಲ್ಲಾರ್, ಶ್ರೀ ನಾಗೇಶ್ ಶೆಟ್ಟಿ ಕಿನ್ನಿಗೋಳಿ, ಸಿಕೆ ಶೆಟ್ಟಿ, ದಿನೇಶ್ ಶೆಟ್ಟಿ ಲೂಲುವಮಜನ್, ರಾಜೇಂದ್ರ ಶೆಟ್ಟಿ, ಅಚಲ್ ಶೆಟ್ಟಿ, ಡಾ. ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.


ಭ್ರಾಮರಿ ತಂಡದವರ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ರಾಧಿಕಾ ರಾಜೇಂದ್ರ ಶೆಟ್ಟಿ ಹಾಗೂ ತಂಡದವರ ಸೆಮಿ-ಕ್ಲಾಸಿಕಲ್ ನೃತ್ಯ, ಸಪ್ನಾ ರೈ ಮತ್ತು ಮಕ್ಕಳ “ಮೊಹಬ್ಬತೇ” ಇನ್ಸ್ಟ್ರುಮೆಂಟಲ್ ಡ್ಯಾನ್ಸ್, ಸುಶ್ಮಿತಾ ಶೆಟ್ಟಿ ಹಾಗೂ ತಂಡದವರ “ಶ್ರೀ ಕಟೀಲ್ ದುರ್ಗಾಪರಮೇಶ್ವರೀ ಮಹಾತ್ಮೆ” ಮತ್ತು ಚೇತನ್ ಶೆಟ್ಟಿ ಹಾಗೂ ತಂಡದವರ “ಅವಳಿ ಶಕ್ತಿಗಳ ರುದ್ರ ಚರಿತ್ರೆ” ಪ್ರೇಕ್ಷಕರ ಮನಸೂರೆಗೊಂಡವು.
ಇದರೊಂದಿಗೆ ಜೆ.ಪಿ. ಗಿಳಿಯಾರು ಹಾಗೂ ತಂಡದವರ “ಅಮರ ಯೋಧ”, ರಮಾ ರಾಜಶೇಖರ್ ಶೆಟ್ಟಿ ತಂಡದ ಮಕ್ಕಳ “ನಮ್ಮ ತುಳುನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ” ಎಂಬ ಸಂದೇಶ ಸಾರುವ ನೃತ್ಯ ಹಾಗೂ ತುಳುನಾಡ ಐಸಿರಿ ಪ್ರಶಾಂತ್ ಶೆಟ್ಟಿ ತಂಡದವರ “ತುಳುನಾಡ ಸಿರಿ ಸಿಂಗಾರ” ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.
ತುಳುನಾಡಿನ ಖ್ಯಾತ ನಿರೂಪಕ ನಿಖಿಲ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಚುರುಕಿನಿಂದ ನಿರೂಪಿಸಿದರು. ಅಂತ್ಯಾಕ್ಷರಿ ಸೇರಿದಂತೆ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಿ, ತುಳುನಾಡಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮೂಲಕ ಅವರು ಸಭಿಕರನ್ನು ಕಾರ್ಯಕ್ರಮದ ಉದ್ದಕ್ಕೂ ಸಕ್ರಿಯವಾಗಿ ತೊಡಗಿಸಿಕೊಂಡರು.
ಅವರ ಹಾಸ್ಯಮಯ, ಚುರುಕು ಮತ್ತು ಮನೋಜ್ಞ ನಿರೂಪಣೆ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಪರಿಣಮಿಸಿತು. ಸಭಿಕರನ್ನು ನಿರಂತರವಾಗಿ ಮನರಂಜಿಸುತ್ತಾ ಕಾರ್ಯಕ್ರಮಕ್ಕೆ ಮತ್ತಷ್ಟು ಜೀವ ತುಂಬಿದ ನಿಖಿಲ್ ಶೆಟ್ಟಿ ಅವರ ನಿರೂಪಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.



ಬಂಟ್ಸ್ ಓಮನ್ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಳೆದ ವರ್ಷ ಅಗಲಿದ ಪ್ರೇರಣಾ ಅವರ ಸ್ಮರಣಾರ್ಥ ಸಂಘದ ಉದಯೋನ್ಮುಖ ಸಾಧಕರಿಗೆ ನೀಡಲಾಗುವ ಯಂಗ್ ಅಚೀವರ್ಸ್ ಅವಾರ್ಡ್ ಅನ್ನು “ಪ್ರೇರಣಾ ಪ್ರಶಸ್ತಿ” ಎಂಬ ಹೆಸರಿನಲ್ಲಿ ಪ್ರದಾನ ಮಾಡಲಾಯಿತು. ಬಂಟ್ಸ್ ಓಮನ್ನ ಮಹಾಪೋಷಕರಾದ ಶ್ರೀ ದಿವಾಕರ ಶೆಟ್ಟಿ ಮಲ್ಲಾರ್, CMD, Multitech Group of Companies ಅವರು ಪ್ರಶಸ್ತಿ ವಿತರಿಸಿದರು.ಈ ಸಂದರ್ಭದಲ್ಲಿ ವೇದಿಕೆ ಮೇಲೆ ಜಯರಾಜ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಸೋಹಾರ್, ಗಣೇಶ್ ಶೆಟ್ಟಿ STS, ಶೇಖರ್ ಶೆಟ್ಟಿ, ಪ್ರದೀಪ್ ಆಳ್ವಾ, ವಿಜಯ್ ಶೆಟ್ಟಿ ಸೋಹಾರ್, ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಊರಿನಿಂದ ಆಗಮಿಸಿದ್ದ ಗಣ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.


ಕಳೆದ 35 ವರ್ಷಗಳಿಂದ ಓಮನ್ ಬಂಟ್ಸ್ ಸಂಘದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಹಾಗೂ ಸಂಘದ ಕಾರ್ಯಚಟುವಟಿಕೆಗಳಿಗೆ ಕೊಡುಗೈ ದಾನಿಯಾಗಿ ಸಹಕರಿಸಿರುವ ಶ್ರೀ ಗಣೇಶ್ ಶೆಟ್ಟಿ ಎಸ್ಟಿಎಸ್ ಅವರನ್ನು “ಒಮಾನ್ ಬಂಟ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಪೋಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಂದಿನ ವರ್ಷದ ಸಮಿತಿಯ ಜವಾಬ್ದಾರಿಯನ್ನು ಸೋಹಾರ್ ಬಂಟ್ಸ್ ವಹಿಸಿಕೊಂಡರು.
ಒಟ್ಟಾರೆಯಾಗಿ, ಬಂಟ್ಸ್ ಓಮನ್ ಸಿರಿ ಸಿಂಗಾರ 2026 ಕಾರ್ಯಕ್ರಮವು ಕ್ರೀಡಾಸ್ಫೂರ್ತಿ, ಸಾಂಸ್ಕೃತಿಕ ಅಭಿಮಾನ, ತುಳುನಾಡಿನ ಪರಂಪರೆ ಹಾಗೂ ಸಂಘಟನೆಯ ಒಗ್ಗಟ್ಟನ್ನು ಪ್ರತಿಬಿಂಬಿಸಿದ ಸ್ಮರಣೀಯ ಸಮಾರಂಭವಾಗಿ ಯಶಸ್ವಿಯಾಯಿತು.
ಬಂಟ್ಸ್ ಓಮನ್ ಸಿರಿ ಸಿಂಗಾರ 2026ರ ಸಮಿತಿ ಸದಸ್ಯರು
ಶ್ರೀಮತಿ ಗುಣವಂತಿ & ದಾಮೋದರ್ ಶೆಟ್ಟಿ, ಮುಂಬೈ
ಶ್ರೀಮತಿ ಲತಿಕಾ & ಲೋಕೇಶ್ ಶೆಟ್ಟಿ, ಮುತ್ತೂರು
ಶ್ರೀಮತಿ ವೀಣಾ & ನವೀನಚಂದ್ರ ಶೆಟ್ಟಿ, ತೋಡಾರು
ಶ್ರೀಮತಿ ರೇಷ್ಮಾ & ಸಚಿನ್ ಜಯರಾಮ್ ಶೆಟ್ಟಿ, ಪಡುಬಿದ್ರಿ
ಶ್ರೀಮತಿ ಸುಶ್ಮಿತಾ & ಧನರಾಜ್ ಆರ್. ಶೆಟ್ಟಿ, ನಿಟ್ಟೂರು
ಶ್ರೀಮತಿ ಪ್ರಜ್ಞಾ & ಸಚಿನ್ ಶೆಟ್ಟಿ, ಪೊಳಲಿ
ಶ್ರೀಮತಿ ಸ್ನೇಹಾ & ಸುಧೀರ್ ಶೆಟ್ಟಿ, ಇರುವೈಲ್
ಶ್ರೀಮತಿ ಪ್ರಜ್ಞಾ & ಧನರಾಜ್ ಬಿ. ಶೆಟ್ಟಿ, ಮಂಗಳಾದೇವಿ
ಶ್ರೀಮತಿ ಲಿಖಿತಾ & ಹರಿಪ್ರಸಾದ್ ಶೆಟ್ಟಿ, ಬೆಳ್ತಂಗಡಿ
ಶ್ರೀಮತಿ ಸ್ವಾತಿ & ಲಿಖಿತ್ ಶೆಟ್ಟಿ, ಲಾಯಿಲ, ಬೆಳ್ತಂಗಡಿ
ಶ್ರೀ ಪ್ರತೀಕ್ ಶೆಟ್ಟಿ, ಕದ್ರಿ
ಶ್ರೀ ಭರತ್ ಶೆಟ್ಟಿ, ಒಡಿಲ್ನಾಳ


