ತೋಕೂರು, ನ. 22: ಲಯನ್ಸ್ ಕ್ಲಬ್ ಮೂಲ್ಕಿ MJF & ಲಿಯೋ ಕ್ಲಬ್ ಮೂಲ್ಕಿ, ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಹಳೆಯಂಗಡಿ, ಫೇಮಸ್ ಯೂತ್ ಕ್ಲಬ್ (ರಿ.) 10ನೇ ತೋಕೂರು ಮತ್ತು ಮಹಿಳಾ ಮಂಡಲ, ಪೂಜಾ ಫ್ರೆಂಡ್ಸ್ ಹಳೆಯಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯವರ ಸಹಕಾರದೊಂದಿಗೆ ಉಚಿತ ಕಣ್ಣಿನ ತಪಾಸಣೆ, ಸಕ್ಕರೆ ಖಾಯಿಲೆ ತಪಾಸಣೆ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವು ಭಾನುವಾರ ಫೇಮಸ್ ಯೂತ್ ಕ್ಲಬ್ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವು ಕುಸುಮ ಎಚ್. ಕೋಟ್ಯಾನ್ ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆಯ ಸೀನಿಯರ್ ಮ್ಯಾನೇಜರ್ ಆದ ಶ್ರೀ ಸಚಿನ್ ಹೆಗ್ಡೆಯವರು ದೀಪ ಪ್ರಜ್ವಲನಗೊಳಿಸಿ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿ ಡಾ. ಅದಿತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿಯವರು ಸ್ವಾಗತಿಸಿ, ಲಯನ್ಸ್ ಕ್ಲಬ್ ನಡೆಸುತ್ತಿರುವ ಜನಸೇವಾ ಕಾರ್ಯಗಳ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಇರಬೇಕಾದ ಅಗತ್ಯತೆಯ ಬಗ್ಗೆ ಮಾತನಾಡಿದರು. ಆರೋಗ್ಯವಿದ್ದರೆ ಮಾತ್ರ ಬದುಕಿಗೆ ಅರ್ಥ. ಇಂತಹ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ನಿಜವಾದ ವರದಾನ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಫೇಮಸ್ ಯೂತ್ ಕ್ಲಬ್ ನ ಗೌರವಾಧ್ಯಕ್ಷರಾದ ಗುರುರಾಜ ಎಸ್. ಪೂಜಾರಿ, ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಹರ್ಷರಾಜ್ ಶೆಟ್ಟಿ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಪಂಜ, ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು 206 ಜನರ ಕಣ್ಣು, ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡವನ್ನು ಪರಿಶೀಲಿಸಿ, ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಕಣ್ಣಿನ ಸಮಸ್ಯೆ ಇರುವವರಿಗೆ ಉಚಿತ ಕನ್ನಡಕ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಯಿತು.
ಫೇಮಸ್ ಯೂತ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುರವರು ಧನ್ಯವಾದ ಸಮರ್ಪಣೆ ಮಾಡಿದರು. ಈ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರಿಗೆ, ಎಲ್ಲಾ ಸಂಯುಕ್ತ ಸಂಘಟನೆಗಳ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಹಾಗೂ ಶಿಬಿರದ ಪ್ರಯೋಜನ ಪಡೆದ ಸಾರ್ವಜನಿಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಸದಸ್ಯರಾದ ಉದಯ ಅಮೀನ್ ರವರು ಅಚ್ಚುಕಟ್ಟಾಗಿ ನಿರೂಪಿಸಿದರು.

