HomeFresh Newsಮಕ್ಕಳಿಗೆ ಬಾಲ್ಯದಿಂದಲೇ ಪ್ರತಿಭೆಗೆ ತಕ್ಕ ತರಬೇತಿ ನೀಡಿದರೆ ಉತ್ತಮ ಸಾಧಕರಾಗಲು ಸಾಧ್ಯ: ಗುರ್ಮೆ ಸುರೇಶ್ ಶೆಟ್ಟಿ

ಮಕ್ಕಳಿಗೆ ಬಾಲ್ಯದಿಂದಲೇ ಪ್ರತಿಭೆಗೆ ತಕ್ಕ ತರಬೇತಿ ನೀಡಿದರೆ ಉತ್ತಮ ಸಾಧಕರಾಗಲು ಸಾಧ್ಯ: ಗುರ್ಮೆ ಸುರೇಶ್ ಶೆಟ್ಟಿ

ಶಿರ್ವ: ಪ್ರತಿಯೊಬ್ಬ ಮಗುವಿನಲ್ಲೂ ಸುಪ್ತ ಪ್ರತಿಭೆ ಅಡಗಿದ್ದು, ಬಾಲ್ಯದಿಂದಲೇ ಅವರ ಪ್ರತಿಭೆಗೆ ತಕ್ಕ ತರಬೇತಿ ಹಾಗೂ ಪ್ರೋತ್ಸಾಹ ನೀಡಿದರೆ ಉತ್ತಮ ಸಾಧಕರಾಗಲು ಸಾಧ್ಯ ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಶಿರ್ವ ಹಿಂದೂ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ನಡೆದ 2026-27ನೇ ಸಾಲಿನ ಹಿರಿಯ ಪ್ರತಿಭೆಗಳ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ಕರಾವಳಿ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಮಾದಕ ದ್ರವ್ಯ ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ತಾಯಿಯ ಸಂಸ್ಕಾರದಿಂದ ಮನೆಯ ದೀಪ ಬೆಳಗುವಂತೆ, ಮಕ್ಕಳು ಉತ್ತಮ ಸಂಕಲ್ಪದೊಂದಿಗೆ ಸಾಧನೆ ಮಾಡುವತ್ತ ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ನಡೆಸುತ್ತಿದೆ. ಕರಾವಳಿಯ ಕಲಾವಿದರು ದೇಶ-ವಿದೇಶಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ ಶೆಟ್ಟಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪೂರಕವಾಗಿವೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಹಿಂದೂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಮೇಡಂ ಹಾಗೂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸುಜಾತಾ ಮೇಡಂ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತೇಜಸ್ ಬಂಗೇರ ನಿರೂಪಿಸಿದರು. ರಾಮಾಂಜಿ ಉಡುಪಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು.
ಜಿಲ್ಲೆಯ ಆಯ್ದ 9 ಕಲಾ ತಂಡಗಳ 85 ಕಲಾವಿದರು ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವೈವಿಧ್ಯಮಯ ಕಲಾ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಪುನೀತ್ ರಾಜ್ ತಂಡದ ಕಂಗೀಲು ನೃತ್ಯ, ಭಾಗ್ಯಲಕ್ಷ್ಮೀ ಉಪ್ಪೂರು ಬಳಗದ ಹರಿಕಥೆ, ರಾಧಾಕೃಷ್ಣ ನೃತ್ಯನಿಕೇತನ ತಂಡದ ಭರತನಾಟ್ಯ, ಖ್ಯಾತ ಗಾಯಕ ಪ್ರಕಾಶ್ ಸುವರ್ಣ ಬಳಗದ ಸುಗಮ ಸಂಗೀತ, ವಿದ್ವಾನ್ ಕೆ. ಬಾಲಚಂದ್ರ ಭಾಗವತ್ ಅವರ ವಾದ್ಯ ಸಂಗೀತ, ವಿದುಷಿ ವೀಣಾ ಸಾಮಗ ಬಳಗದ ಸಮೂಹ ನೃತ್ಯ, ಬೆಳ್ಮಣ್ ರಕ್ಷಿತ್ ಮತ್ತು ತಂಡದ ಹಾಲಕ್ಕಿ ಸುಗ್ಗಿ ಕುಣಿತ, ಬನ್ನಂಜೆ ವಾಸುದೇವ ಮತ್ತು ಬಳಗದ ಚಂಡೆ ವಾದನ ಹಾಗೂ ಕೋಟ ನರಸಿಂಹ ತುಂಗ ನಿರ್ದೇಶನದ ‘ಶೂರ್ಪನಖಿ ಮಾನಭಂಗ’ ಯಕ್ಷಗಾನ ಬಯಲಾಟ ಗಮನ ಸೆಳೆಯಿತು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments