ಕಾಟಿಪಳ್ಳ ಜಲೀಲ್ ಕೊಲೆಗೆ ಬಿಜೆಪಿ ಸರಕಾರವೇ ನೇರ ಹೊಣೆ, ಪೊಲೀಸರ ಕೈಗಳನ್ನು ಸರಕಾರ ಕಟ್ಟಿಹಾಕಿದೆ : ಡಿವೈಎಫ್ಐ

ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಬಿಜೆಪಿ ಸರಕಾರ ಅದರಿಂದ ಪಾರಾಗಲು ಮತೀಯ ಧ್ರುವೀಕರಣದ ಅಪಾಯಕಾರಿ ಆಟಗಳನ್ನು ಆಡುತ್ತಿದೆ. ಕರಾವಳಿ ಭಾಗದಲ್ಲಿ ಪೊಲೀಸರ ಕೈಗಳನ್ನು ಕಟ್ಟಿಹಾಕಿ ಮತೀಯ ಗೂಂಡಾ ತಂಡಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಂತಹ ದುಂಡಾವರ್ತನೆಯ ಭಾಗವಾಗಿಯೆ ಕಾಟಿಪಳ್ಳ ದಲ್ಲಿ ಜಲೀಲ್ ಎಂಬ ಅಮಾಯಕ ಅಂಗಡಿ ವ್ಯಾಪಾರಿಯ ಕೊಲೆಯಾಗಿದೆ. ಈ ಕೊಲೆಗೆ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಆರೋಪಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿಯ ಮತೀಯ ವಿಭಜನೆಯ ಅಜೆಂಡಾವನ್ನು ರಾಜ್ಯದಲ್ಲಿ ಸರಕಾರವೇ ಮುಂದೆ ನಿಂತು ಪ್ರಾಯೋಜಿಸಿದೆ. ಹಿಜಾಬ್ ವಿವಾದ, ಹಲಾಲ್, ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ಅಭಿಯಾನಗಳು ಕಾನೂನಿನ ಭಯವೇ ಇಲ್ಲದೆ ವ್ಯಾಪಕವಾಗಿ ನಡೆಯಿತು‌. ಇಂತಹ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗುವ ಸಂದರ್ಭ ಸೃಷ್ಟಿಯಾಯಿತು. ಸಂಘಪರಿವಾರದ ಪ್ರಯೋಗ ಶಾಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾರತಮ್ಯದ ರಾಜಕಾರಣ ಈ ಅವಧಿಯಲ್ಲಿ ಹೊಸ ಎತ್ತರವನ್ನು ತಲುಪಿತು. ಮುಖ್ಯಮಂತ್ರಿ ಬೊಮ್ಮಾಯಿ ಸ್ವತಹ ಈ ಅಜೆಂಡಾ ಜಾರಿಗೆ ಬಹಿರಂಗವಾಗಿ ಇಲ್ಲಿ ಮುಂಚೂಣಿಯಲ್ಲಿ ನಿಂತದ್ದನ್ನು ಎಲ್ಲರೂ ಗಮನಿಸಿದ್ದಾರೆ‌. ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬದ ಭೇಟಿಗೆ ಆಗಮಿಸಿದಾಗ ಮಸೂದ್ ಹಾಗೂ ಫಾಝಿಲ್ ಕುಟುಂಬವನ್ನು ಕಡೆಗಣಿಸಿದ್ದು, ಕೊಲೆಗೀಡಾದ ಈ ಎರಡೂ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸಿದ್ದು ಸರಕಾರದ ತಾರತಮ್ಯ ನೀತಿಗೆ ಬಹಿರಂಗ ಉದಾಹರಣೆ. ಜಿಲ್ಲೆಯ ಬಿಜೆಪಿ ಶಾಸಕ, ಸಂಸದರುಗಳು ಇದೇ ಮಾದರಿಯನ್ನು ಅನುಸರಿಸಿ ಕೊಲೆಗೀಡಾದ ಮುಸ್ಲಿಮ್ ಕುಟುಂಬಗಳಿಗೆ ಕನಿಷ್ಟ ಸಾಂತ್ವನವನ್ನೂ ಹೇಳಲು ನಿರಾಕರಿಸಿ ಬಹಿರಂಗವಾಗಿ ತಾರತಮ್ಯ ಆಚರಿಸಿದರು. ಇದರ ಮುಂದುವರಿದ ಭಾಗವಾಗಿ ಕಳೆದ ಮೂರು ತಿಂಗಳುಗಳಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ಗುಂಪುಹಲ್ಲೆಗಳು ನಡೆಯುತ್ತಿದೆ. ಈ ಎಲ್ಲಾ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಂತ್ರಸ್ತರ ಮೇಲೆಯೆ ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದೆ. ದಾಳಿಕೋರ ಗುಂಪುಗಳೊಂದಿಗೆ ಮೃದುವಾಗಿ ನಡೆದು ಕೊಂಡಿದೆ‌. ಇದೆಲ್ಲವೂ ಪೊಲೀಸರ ಕೈಗಳನ್ನು ಬಿಜೆಪಿ ಸರಕಾರ ಕಟ್ಟಿಹಾಕಿರುವುದರ ಪರಿಣಾಮ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆ ಮೂಲಕ ಚುನಾವಣೆಯ ಸಂದರ್ಭ ಹಿಂದು ಮುಸ್ಲಿಂ ವಿಭಜನೆಯನ್ನು ಮತ್ತಷ್ಟು ತೀವ್ರಗೊಳಿಸುವುದು ಬಿಜೆಪಿಯ ಘೋಷಿತ ಅಜೆಂಡಾ ‌

ಇಂತಹ ಬಹಿರಂಗ ತಾರತಮ್ಯ, ಪೊಲೀಸರ ಮೌನದ ಪರಿಣಾಮವಾಗಿಯೇ ಕಾಟಿಪಳ್ಳ ದಲ್ಲಿ ಅಂಗಡಿ ವ್ಯಾಪಾರಿ ಜಲೀಲ್ ಕೊಲೆಗೆ ಕೋಮುವಾದಿ ಸಂಘಟನೆಗಳ ಸಹವಾಸ ಹೊಂದಿರುವ ಕ್ರಿಮಿನಲ್ ಗಳಿಗೆ ಕುಮ್ಮಕ್ಕು ದೊರಕಿದೆ. ಬಿಜೆಪಿ ಸರಕಾರದ ಇಂತಹ ಅಪಾಯಕಾರಿ ನೀತಿಗಳ ಕುರಿತು ಜನತೆ ಎಚ್ಚರಗೊಳ್ಳಬೇಕು, ಸರಕಾರದ ಘೋರ ವೈಫಲ್ಯ, ಜನಪ್ರತಿನಿಧಿಗಳ ವಿರುದ್ದ ಮತದಾರರಲ್ಲಿ ಮೂಡಿರುವ ಅಸಮಾಧಾನದಿಂದ ಚುನಾವಣೆಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ನಡೆಸುತ್ತಿರುವ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು. ಅಮಾಯಕ ಜಲೀಲ್ ಕೊಲೆಯ ನಿಷ್ಪಕ್ಷಪಾತ ತನಿಖೆ ಹಾಗೂ ಆ ಕುಟುಂಬಕ್ಕೆ ಪರಿಹಾರ ಒದಗಿಸಲು ಧರ್ಮಾತೀತವಾಗಿ ಜನತೆ ಒಗ್ಗಟ್ಟಿನಿಂದ ಆಗ್ರಹಿಸಬೇಕು, ಆ ಮೂಲಕ “ಮತೀಯ ಧ್ರುವೀಕರಣ” ದ ಅಜೆಂಡಾಗಳನ್ನು ಸೋಲಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published.