ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಇಡೀ ರಾಜ್ಯದಲ್ಲಿ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭದ್ರವಾಗಿದ್ದ ಎಡರಂಗದ ಕೋಟೆ ಈ ಬಾರಿ ಧರಾಶಾಯಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ಬೆಳಿಗ್ಗೆ 10:20ರ ವೇಳೆಗೆ
ಯುಡಿಎಫ್: 91 ಸ್ಥಾನಗಳಲ್ಲಿ ಮುನ್ನಡೆ
ಎಲ್ ಡಿ ಎಫ್: 46 ಸ್ಥಾನಗಳಲ್ಲಿ ಮುನ್ನಡೆ
ಎನ್ ಡಿಎ: 02 ಸ್ಥಾನಗಳಲ್ಲಿ ಮುನ್ನಡೆ
ಕಣ್ಣೂರಿನ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆರಂಭಿಕ ಹಿನ್ನಡೆ ಅನುಭವಿಸಿರುವುದು ದೊಡ್ಡ ಅಚ್ಚರಿ ಮೂಡಿಸಿದೆ. ಎಡರಂಗದ ಪ್ರಮುಖ ಸಚಿವರು ಕೂಡ ಪರಾಜಯದ ಭೀತಿಯಲ್ಲಿದ್ದಾರೆ.
ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಬರೋಬ್ಬರಿ 6,370 ಮತಗಳ ಬೃಹತ್ ಮುನ್ನಡೆಯೊಂದಿಗೆ ಜಯದತ್ತ ದಾಪುಗಾಲು ಹಾಕುತ್ತಿದ್ದಾರೆ.
ಕಾಸರಗೋಡಿನಲ್ಲಿ ಯುಡಿಎಫ್ 2,453 ಮತಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎಡರಂಗದ ಭದ್ರಕೋಟೆಗಳಾದ ಉದುಮ ಮತ್ತು ತ್ರಿಕರಿಪುರದಲ್ಲೂ ಯುಡಿಎಫ್ ಬಾವುಟ ಹಾರುತ್ತಿದೆ.
ಕೇರಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್ ಡಿಎ ಮೈತ್ರಿಕೂಟ ಮೂರು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ ರಾಜಕೀಯ ಹೊಸ ಆಯಾಮಕ್ಕೆ ನಾಂದಿ ಹಾಡಿದೆ.
ಹತ್ತು ವರ್ಷಗಳ ಎಡರಂಗದ ಆಡಳಿತಕ್ಕೆ ಕೇರಳದ ಮತದಾರ ಈ ಬಾರಿ ಬ್ರೇಕ್ ಹಾಕುವ ಮೂಡ್‌ನಲ್ಲಿದ್ದು, ಯುಡಿಎಫ್ ಪಾಳಯದಲ್ಲಿ ಈಗಾಗಲೇ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ.
