ಕೊಲ್ಯ ಭೀಕರ ಕಾರು ಅಪಘಾತ : ಒರ್ವ ಸಾವು ಮೂವರಿಗೆ ಗಾಯ

ಮಂಜೇಶ್ವರ : ಗಡಿ ಪ್ರದೇಶಕ್ಕೆ ಸಮೀಪದ ಕೊಲ್ಯ ಎಂಬಲ್ಲಿ ಭಾನುವಾರದಂದು ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಮಾಹಿತಿ ಲಭಿಸಿದೆ.
ರಾಷ್ಟ್ರೀಯ ಹೆದ್ದಾರಿ 66 ಕೊಲ್ಯದ ವಿಭಜಗಕ್ಕೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕಾರು ಪೂರ್ಣವಾಗಿ ನುಜ್ಜು ಗುಜ್ಜಾಗಿದೆ.


ಕುಂಜತ್ತೂರು ನಿವಾಸಿ ಸಯ್ಯದ್ ಎಂಬವರ ಪುತ್ರ ಆಹ್ಮದ್ ರಿಫಾಯಿ ಸಯ್ಯದ್ (24) ಮೃತ ದುರ್ದೈವಿ. ಜೊತೆಯಾಗಿದ್ದ ಈತನ ಸಂಬಂಧಿಕ ಉಪ್ಪಳ ನಿವಾಸಿ ಬಶ್ರ (22) ನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಪ್ರಯಾಣಿಕರು ಕೂಡಾ ಗಾಯಗೊಂಡಿದ್ದಾರೆ.
ಗಂಭೀರ ಸ್ವರೂಪದ ಗಾಯಗಳಾದರೂ ಕೂಡಾ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೊರತೆಯಾಗಿತ್ತು ಎನ್ನುವಂತಹ ಆರೋಪ ಕೇಳಿ ಬಂದಿದ್ದು. ಈ ವಿಚಾರವಾಗಿ ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯರು ಪೊಲೀಸ್ರನ್ನು ತರಾಟೆಗೆತ್ತಿಕೊಂಡರು. ಅಲ್ಲದೆ, ಅಪಘಾತ ನಡೆದ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲು ಕೂಡಾ ಸ್ಥಳೀಯರು ಇದೇ ವೇಳೆ ಆಗ್ರಹಿಸಿದ್ದಾರೆ