ದ.ಕ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ: ಡಿಸಿ ರವಿಕುಮಾರ್
ದಕ್ಷಿಣ ಕನ್ನಡದ ಹಲವೆಡೆ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಪ್ರತೀ ವರ್ಷ ಜೂನ್ ತಿಂಗಳಲ್ಲಿ ಮಳೆ ಬರಬೇಕಿತ್ತು. ತಡವಾದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಆದರೂ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಎಲ್ಲಾ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಸದ್ಯ ತುಂಬೆ ಡ್ಯಾಂನಲ್ಲಿ 1.86 ಮೀ. ಮಟ್ಟಕ್ಕೆ ನೀರು ಇಳಿದಿದೆ. ಇದರಿಂದ ಮಂಗಳೂರು ನಗರಕ್ಕೆ ನೀರಿನ ಸಮಸ್ಯೆ ಇದೆ ಅಂತ ಪಾಲಿಕೆ ಕಮಿಷನರ್ ಹೇಳಿದ್ದರು. ಹೀಗಾಗಿ ಎಎಂಆರ್ ಡ್ಯಾ ನಿಂದ ಈಗಾಗಲೇ ನೀರು ಬಿಡಲಾಗಿದೆ. ಇವತ್ತು ಸಂಜೆಯೊಳಗೆ ಆ ನೀರು ತುಂಬೆ ಡ್ಯಾಂ ಬಂದು ಸೇರಲಿದೆ. ತುಂಬೆ ಡ್ಯಾಂನಲ್ಲಿ 4 ಮೀ ನೀರು ತುಂಬಲಿದೆ ಎಂದರು.
ಕಳೆದ ಎರಡು ದಿನ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕೆಲಸ ಇತ್ತು. ಹೀಗಾಗಿ ಎರಡು ದಿನ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಪೈಪ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ನೀರಿನ ಪೂರೈಕೆ ಆಗಿಲ್ಲ. ಹೀಗಾಗಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಅವರು ತಮ್ಮ ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು ದ.ಕ ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ನೆರವು ನೀಡಲಿದೆ ಎಂದರು.
ರಾಜ್ಯ ಮತ್ತು ಕೇಂದ್ರದ ಹವಾಮಾನ ವರದಿಯಂತೆ ಮೂರ್ನಾಲ್ಕು ದಿನ ಮಳೆ ಆಗುವ ಮುನ್ಸೂಚನೆ ಸಿಕ್ಕಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗುತ್ತದೆ ಅಂತ ಸೂಚನೆ ಸಿಕ್ಕಿದೆ. ಅನಾಹುತ ಆಗದಂತೆ ತಡೆಯಲು ಸರ್ಕಾರ ನಿರ್ದೇಶನ ಕೊಟ್ಟಿದೆ ಈ ನಿಟ್ಟಿನಲ್ಲಿ ನಾವು ಅಲರ್ಟ್ ಆಗಿದ್ದು, ತಯಾರಿ ಆಗಿದೆ ಎಂದರು.