HomeFresh Newsಮಂಗಳೂರು: ಮೇ 1ರಿಂದ ನೀರು ಪೂರೈಕೆಯಲ್ಲಿ ರೇಶನಿಂಗ್

ಮಂಗಳೂರು: ಮೇ 1ರಿಂದ ನೀರು ಪೂರೈಕೆಯಲ್ಲಿ ರೇಶನಿಂಗ್

ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಜೂನ್ 10ರವರೆಗೂ ನೀರು ಪೂರೈಕೆಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಮೊದಲಾದ ಪ್ರದೇಶಗಳಿಗೂ ಸೂಕ್ತ ನೀರು ಪೂರೈಕೆಯ ದೃಷ್ಟಿಯಿಂದ ಮೇ 1ರಿಂದ ರೇಶನಿಂಗ್ ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿಯೂ ಆಗಿರುವ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ತುಂಬೆಯಿಂದ ಪ್ರಸಕ್ತ 160 ಎಂಎಲ್ಡಿ ನೀರು ಪಂಪಿಂಗ್ ನಡೆಯುತ್ತಿದ್ದು, ಅದರಂತೆಯೇ ನೀರು ಪಂಪಿಂಗ್ ಪ್ರತಿನಿತ್ಯ ಮುಂದುವರಿಯಲಿದೆ. ಆದರೆ ಪೂರೈಕೆಯಲ್ಲಿ ಕೆಲವೊಂದು ಗಂಟೆಗಳ ಕಾಲ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿ ನೀರು ಪೂರೈಕೆಯಾಗಲಿದೆ. ಇದರಿಂದ ಕನಿಷ್ಠ ಎರಡು ದಿನಗಳಿಗೊಮ್ಮೆ ಪಾಲಿಕೆಯ 60 ವಾರ್ಡ್ ಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎ.24ಕ್ಕೆ ತುಂಬೆ ಅಣೆಕಟ್ಟಿನಲ್ಲಿ 4.53 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.53 ಮೀಟರ್ ನೀರಿದೆ. ಈವರೆಗೂ ಎಎಂಆರ್ ಡ್ಯಾಂನಿಂದ ನೀರನ್ನು ತುಂಬೆಗೆ ಹರಿಸಿಲ್ಲ. ನಗರ ಮಾತ್ರವಲ್ಲದೆ, ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಅಣೆಕಟ್ಟುಗಳಿಗೆ ಒಳಹರಿವು ಇದೆ ಎಂದು ಅವರು ಹೇಳಿದರು.

ಅನಧಿಕೃತ ಫ್ಲೆಕ್ಸ್ ಅಳವಡಿಕೆ ಸಮಸ್ಯೆಯಾಗಿದ್ದು, ಈ ನಡುವೆ ಡಿವೈಡರ್ಗಳಲ್ಲಿಯೂ ಫ್ಲೆಕ್ಸ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಆಸ್ಪದ ನೀಡುವಂತಿಲ್ಲ. ಸರಕಾರಿ ಕಾರ್ಯಕ್ರಮಗಳ ಫ್ಲೆಕ್ಸ್ಗಳನ್ನು ಕೂಡಾ ಈ ರೀತಿಯಾಗಿ ಅಳವಡಿಸುವಂತಿಲ್ಲ. ಈ ಬಗ್ಗೆ ಎಂಎಲ್ಎ, ಎಂಎಲ್ ಸಿಯವರಿಗೂ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಫ್ಲೆಕ್ಸ್ ಅಳವಡಿಸುವ ವಿರುದ್ಧ ಶೂನ್ಯ ಸಹಿಷ್ಣುತೆಯೊಂದಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದಲ್ಲಿ ಪ್ರಸಕ್ತ ನಡೆಯುತ್ತಿರುವ ಜಲಸಿರಿ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅದಾಗ್ಯೂ ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಗಾಗಿ ಅಗೆತ ಮಾಡಿರುವಲ್ಲಿ ಮೇ 20ರೊಳಗೆ ಮುಚ್ಚುವ ಕಾರ್ಯ ನಡೆಸುವಂತೆ ಸಚನೆ ನೀಡಲಾಗಿದೆ. ಸೋಮವಾರ ಮತ್ತೆ ಈ ಬಗ್ಗೆ ಸಭೆ ನಡೆಯಲಿದೆ. ಮಳೆಗಾಲದಲ್ಲಿ ಯಾವುದೇ ಅಗೆತಕ್ಕೆ ಅವಕಾಶವಿಲ್ಲ. ಹಾಗೂ ಅಗೆದಿರುವುದನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments