ಸರಕಾರಿ ಪಾಲಿಟೆಕ್ನಿಕ್ ನಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿಯಿರಿಸಿದ ಮಾರ್ಚ್,ಆಗಸ್ಟ್, ಸಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನವನ್ನು ಕೂಡಲೇ ಪಾವತಿಸಲು ಒತ್ತಾಯಿಸಿ, ಹೊರಗುತ್ತಿಗೆ ನೌಕರರಿಗೆ ಅನ್ಯಾಯವೆಸಗಿದ ಬೆಂಗಳೂರಿನ ಆಬ್ಜೆಕ್ಟ್ ಟೆಕ್ನಾಲಜೀಸ್ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕಾಗಿ ಒತ್ತಾಯಿಸಿ,ಕನಿಷ್ಠ ಕೂಲಿ, PF,ESI ಸೇರಿದಂತೆ ಸಾಮಾಜಿಕ ಭದ್ರತೆಗಾಗಿ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಆಗ್ರಹಿಸಿ ಇಂದು(17-11-2026) ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು

CITU ಗೆ ಸಂಯೋಜಿತಗೊಂಡಿರುವ ಸರಕಾರಿ ಪಾಲಿಟೆಕ್ನಿಕ್ ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಡಿ’ ಗ್ರೂಪ್ ಹೊರಗುತ್ತಿಗೆಯ ಆಧಾರದಲ್ಲಿ ಲ್ಯಾಬ್,ಲೈಬ್ರರಿ, ಕಚೇರಿ ನಿರ್ವಹಣೆ ಕೆಲಸ ಸೇರಿದಂತೆ ಶಿಕ್ಷಕೇತರರಾಗಿ ಕಳೆದ 7 ವರ್ಷಗಳಿಂದ ದುಡಿಯುತ್ತಿರುವ ನೌಕರರು ಇಂದು ತೀವ್ರ ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರಾದ ಬೆಂಗಳೂರಿನ OBJECT TECHNOLOGIES ಎಂಬ ಸಂಸ್ಥೆಯು 2026ರ ಮಾರ್ಚ್ ನಿಂದ ನೌಕರರ ಮಾಸಿಕ ವೇತನವನ್ನು ನೀಡದೆ ಸತಾಯಿಸಿತ್ತು.ಈತನ್ಮಧ್ಯೆ ಕಾರ್ಮಿಕ ಇಲಾಖೆಯ ಮಧ್ಯಪ್ರದೇಶದಿಂದ ಎಪ್ರಿಲ್, ಮೇ ಜೂನ್ ಜುಲೈ ತಿಂಗಳ ವೇತನ ಪಾವತಿಯಾಯಿತು. ಆದರೆ ಮಾರ್ಚ್,ಆಗಸ್ಟ್, ಸಪ್ಟೆಂಬರ್ ಅಕ್ಟೋಬರ್ ತಿಂಗಳ ವೇತನ ಹಾಗೂ ಮಾರ್ಚ್ ನಿಂದ ಅಕ್ಟೋಬರ್ ತನಕದ PF ESI ಯ ಹಣವನ್ನು ಪಾವತಿಸಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಗದಿಪಡಿಸಿದ ಕನಿಷ್ಠ ಕೂಲಿಯನ್ನೂ ಕೂಡ ನೀಡುತ್ತಿಲ್ಲ.ಗುತ್ತಿಗೆ ನೌಕರರ ಪರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಮಾನ ಕೆಲಸಕ್ಕೆ ಸಮಾನ ವೇತನ ಇನ್ನೂ ಜಾರಿಯಾಗಿಲ್ಲ. ನೇಮಕಾತಿ ಪತ್ರ,ಗುರುತುಚೀಟಿ, ಬೋನಸ್ ನೀಡಿಲ್ಲ. ಒಟ್ಟಾರೆಯಾಗಿ ಗುತ್ತಿಗೆದಾರ ಸಂಸ್ಥೆಯು ಬಹುಸಂಖ್ಯಾತ ಮಹಿಳಾ ನೌಕರರನ್ನು ಸೇರಿದಂತೆ ಎಲ್ಲಾ ನೌಕರರನ್ನು ಅತ್ಯಂತ ಅಮಾನವೀಯಯಾಗಿ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರುರವರು ಮಾತನಾಡಿ, ಬೆಂಗಳೂರಿನ ಗುತ್ತಿಗೆದಾರ ಸಂಸ್ಥೆಯು ಕಪ್ಪುಪಟ್ಟಿಗೆ ಸೇರಿದ್ದರೂ ರಾಜ್ಯಾದ್ಯಂತ ಈ ಸಂಸ್ಥೆಯಡಿಯಲ್ಲಿ ಸಾವಿರಾರು ನೌಕರರರು ದುಡಿಯುತ್ತಿದ್ದಾರೆ. ಇಂತಹ ಹೊರಗುತ್ತಿಗೆಯ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಪರವಾಗಿ ನ್ಯಾಯ ನೀಡಬೇಕಾದ ರಾಜ್ಯ ಸರಕಾರದ ಅಡಿಯಲ್ಲಿರುವ ತಾಂತ್ರಿಕ ಶಿಕ್ಷಣ ಇಲಾಖೆಯು ಮೂಲ ಮಾಲಿಕರಾಗಿದ್ದು ಇವತ್ತಿನವರೆಗೆ ಯಾವುದೇ ರೀತಿಯ ಸ್ಪಂದನ ನೀಡಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಪುರುಷೋತ್ತಮ ಬಂಗೇರ ಹಾಗೂ ಪ್ರಧಾನ ಕಾರ್ಯದರ್ಶಿ ತುಳಸಿ ಯೆಯ್ಯಾಡಿಯವರು ಮಾತನಾಡುತ್ತಾ,ಮೂಲ ಮಾಲಿಕರಾದ ತಾಂತ್ರಿಕ ಶಿಕ್ಷಣ ಇಲಾಖೆಯು ಡಿ’ ಗ್ರೂಪ್ ಹೊರಗುತ್ತಿಗೆ ನೌಕರರ ಎಲ್ಲಾ ಸಂಕಷ್ಟಗಳನ್ನು ಆಲಿಸಿ ಬಾಕಿಯಿರಿಸಿದ ವೇತನವನ್ನು ತಕ್ಷಣ ಪಾವತಿಸಬೇಕು, ಬಾಕಿಯಿರಿಸಿದ PF ESI ಹಣವನ್ನೂ ಕೂಡ ಪಾವತಿಸಬೇಕು,ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ನೌಕರರಿಗೆ ತೀರಾ ಅನ್ಯಾಯವೆಸಗಿದ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹೋರಾಟವನ್ನು ಬೆಂಬಲಿಸಿ DYFI ಜಿಲ್ಲಾ ಕಾರ್ಯದರ್ಶಿ ರಿಜ್ವಾನ್ ಹರೇಕಳರವರು ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ನಾಯಕರಾದ ಗಿರಿಯಪ್ಪ,ದಿವ್ಯಾ ಕಾಪು,ಭುವಿಕಾ ಸಾಲ್ಯಾನ್, ಅಕ್ಷತಾ,ಪ್ರಮೀಳಾ, ಮೇಘಾ, ಪ್ರಿಯದರ್ಶಿನಿ, ರಘುನಾಥ್, ರೆಮಿತಾ, ರವಿ,ದೀಕ್ಷಾ,ರಿತೇಶ್, ಸಂದೀಪ್ ಮುಂತಾದವರು ವಹಿಸಿದ್ದರು

