HomeFresh Newsದುಬೈಯಲ್ಲಿ ‘ದುಬೈ ಯಕ್ಷೋತ್ಸವ–2026’ – ಶ್ರೀ ಹರಿಲೀಲಾಮೃತಂ” ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್...

ದುಬೈಯಲ್ಲಿ ‘ದುಬೈ ಯಕ್ಷೋತ್ಸವ–2026’ – ಶ್ರೀ ಹರಿಲೀಲಾಮೃತಂ” ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ

ದುಬೈ: ಯುಎಇಯ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಹನ್ನೊಂದನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿರುವ ‘ದುಬೈ ಯಕ್ಷೋತ್ಸವ–2026’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ ಸಮಾರಂಭವು ನವೆಂಬರ್ 15ರಂದು ದುಬೈಯ ಮ್ಯಾಂಚೆಸ್ಟರ್ ಪ್ಲಾಜಾ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಸಹಯೋಗದೊಂದಿಗೆ ಡಿಸೆಂಬರ್ 20ರಂದು ನಡೆಯಲಿರುವ ಈ ಯಕ್ಷೋತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಯುಎಇಯ ವಿವಿಧ ಕನ್ನಡ ಹಾಗೂ ತುಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಯಕ್ಷೋತ್ಸವಕ್ಕೆ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಶ್ರೀಯುತ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್‌ಆರ್‌ಐ ವೇದಿಕೆಯ ಅಧ್ಯಕ್ಷ ಶ್ರೀಯುತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಹಾಗೂ ಕಲಾಪೋಷಕ ಶ್ರೀಯುತ ವಾಸುದೇವ ಭಟ್ ಪುತ್ತಿಗೆ, ಚಿತ್ರನಟ ಶ್ರೀಯುತ ವಿನೀತ್ ಕುಮಾರ್, ಉದ್ಯಮಿ ಶ್ರೀಯುತ ಸುಂದರ್ ಶೆಟ್ಟಿ, ಸಾಹಿತಿ ಹಾಗೂ ಬಿಲ್ಲವಾಸ್ ಅಬುಧಾಬಿಯ ಪ್ರತಿನಿಧಿ ಶ್ರೀಯುತ ಮನೋಹರ್ ತೋನ್ಸೆ, ಉದ್ಯಮಿ ಶ್ರೀಯುತ ಕಾರ್ತಿಕ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಶ್ರೀಯುತ ನಾಗರಾಜ್ ರಾವ್ ಉಡುಪಿ, ಶ್ರೀಯುತ ಮನೋಹರ ಹೆಗ್ಡೆ, ಸಂಘದ ಗೌರವ ಸಲಹೆಗಾರ ಶ್ರೀಯುತ ಜಯಂತ್ ಶೆಟ್ಟಿ, ಗಮ್ಮತ್ ಕಲಾವಿದೆರ್ ದುಬೈಯ ಅಧ್ಯಕ್ಷ ಶ್ರೀಯುತ ವಾಸುಕುಮಾರ್ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಶ್ರೀಯುತ ಪ್ರಭಾಕರ ಸುವರ್ಣ ಕರ್ನಿರೆ, ವೀರಶೈವ ಲಿಂಗಾಯತ ಸಮಾಜ ದುಬೈಯ ಶ್ರೀಯುತ ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕ ಶ್ರೀಯುತ ವೆಂಕಟೇಶ ಶಾಸ್ತ್ರಿ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ಶ್ರೀಯುತ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಯಕ್ಷಗಾನ ಗುರು ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಉಪಸ್ಥಿತರಿದ್ದರು.


ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿಯವರು, ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ಅಭ್ಯಾಸ ಕೇಂದ್ರದ ಕಾರ್ಯಕ್ರಮಗಳನ್ನು ಗಮನಿಸುತ್ತಾ ಬಂದಿದ್ದು, ಕೇಂದ್ರವು ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಶ್ರಮಿಸುತ್ತಿರುವ ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಹಾಗೂ ಶರತ್ ಕುಡ್ಲ ಅವರನ್ನು ಅಭಿನಂದಿಸಿ, ಡಿಸೆಂಬರ್ 20ರಂದು ನಡೆಯಲಿರುವ ಯಕ್ಷೋತ್ಸವಕ್ಕೆ ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಗುರು ಶೇಖರ್ ಡಿ. ಶೆಟ್ಟಿಗಾರ್ ಅವರು, ‘ದುಬೈ ಯಕ್ಷೋತ್ಸವ–2026’ರ ರೂಪುರೇಷೆ, ಕಾರ್ಯಕ್ರಮಗಳ ವಿವರ ಹಾಗೂ ಯಕ್ಷಗಾನದ ವಿವಿಧ ವೇಷ ವೈವಿಧ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಡಿಸೆಂಬರ್ 20ರಂದು ದುಬೈ ಅಲ್ ಗಿಸೈಸ್‌ನ ಜೇಮ್ಸ್ ಕ್ಯಾಂಬ್ರಿಡ್ಜ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣ ( ದುಬಾಯಿ Airport Free zone Metro station ಹತ್ತಿರ) ದಲ್ಲಿ ಮಧ್ಯಾಹ್ನ 1.30ರಿಂದ ಯಕ್ಷೋತ್ಸವ ನಡೆಯಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿಮ್ಮೇಳದಲ್ಲಿ ಪ್ರಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಶ್ರೀ ಸತೀಶ್ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ ಹಾಗೂ ಮದ್ದಳೆಗಾರರಾದ ಶ್ರೀ ಆನಂದ ಪಡ್ರೆಯವರು ಭಾಗವಹಿಸಲಿದ್ದಾರೆ. ಜೊತೆಗೆ ಕೇಂದ್ರದ ಕಲಾವಿದರಾದ ಸರ್ವಶ್ರೀಗಳಾದ ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ ಹಾಗೂ ಪುತ್ತಿಗೆ ವೆಂಕಟೇಶ ಶಾಸ್ತ್ರಿ ರಿತೇಶ್ ಆಚಾರ್ಯ ಬಾರ್ಕೂರು, ಸಂದೇಶ್ ಆಚಾರ್ಯ ಬ್ರಹ್ಮಾವರ, ಆದಿತ್ಯ ದಿನೇಶ್ ಶೆಟ್ಟಿ ಮೊದಲಾದವರು ಚೆಂಡೆ-ಮದ್ದಳೆ ಮತ್ತು ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಸಂಗೀತದಲ್ಲಿ ಶ್ರೀ ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ, ಕುಮಾರಿ ಐಶಾನಿ ದೀಪಕ್ ಸುಳ್ಯ, ಕುಮಾರಿ ನ್ಯೋಮಿ ಸಾಯಿನಾಥ ಶೆಟ್ಟಿ ಮೊದಲಾದವರ ಸುಶ್ರಾವ್ಯ ಕಂಠದಲ್ಲಿ ಕೇಂದ್ರದ ಕಲಾವಿದರು “ಶ್ರೀ ಹರಿ ಲೀಲಾಮೃತಂ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.

ಪ್ರಸಾಧನ ಮತ್ತು ವೇಷಭೂಷಣದ ಜವಾಬ್ದಾರಿಯನ್ನು ಶ್ರೀಯುತರುಗಳಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ ಹಾಗೂ ಸಾತ್ವಿಕ್ ಅಂಚನ್ ಕಾರ್ಕಳ ನಿರ್ವಹಿಸಲಿದ್ದಾರೆ.

ಯಕ್ಷೋತ್ಸವದ ಪ್ರವೇಶ ಟಿಕೆಟ್ ದರ 25 ದಿರ್ಹಂ (AED 25) ಆಗಿದ್ದು, ಟಿಕೆಟ್ ಕಾಯ್ದಿರಿಸಲು ಆಸಕ್ತರು 0529157825, 0566182239 ಅಥವಾ 0552656900 ಈ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಬಾರಿಯ ಕಾರ್ಯಕ್ರಮ ಹೊಸ ಲೊಕೇಶನ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕೇಂದ್ರದ ಸದಸ್ಯ ಶ್ರೀ ಗಿರೀಶ್ ನಾರಾಯಣ್ ನಿರೂಪಿಸಿದರು. ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ, ವಂದಿಸಿದರು.

Sudha Furniture - 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments