ಶಬರಿಮಲೆ ದರ್ಶನಕ್ಕೆ ದಾಖಲೆಯ ಬುಕಿಂಗ್

ಶಬರಿಮಲೆ ದೇವಾಲಯದಲ್ಲಿ ಜನಸಂದಣಿ ನಿಯಂತ್ರಣ ಮತ್ತು ವ್ಯವಸ್ಥೆ ಬಗ್ಗೆ ಚರ್ಚಿಸುವುದಕ್ಕಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸೋಮವಾರ ಮಧ್ಯಾಹ್ನ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಸೋಮವಾರ ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ದಾಖಲೆಯ ಬುಕಿಂಗ್ ನಡಿದಿದೆ. ಸೋಮವಾರ ದೇವರ ದರ್ಶನಕ್ಕಾಗಿ ಸರಿ ಸುಮಾರು 1,07,260 ಮಂದಿ ಬುಕ್ ಮಾಡಿದ್ದು, ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟೊಂದು ಬುಕ್ಕಿಂಗ್ ಆಗಿರುವುದು. ಒಂದು ಲಕ್ಷಕ್ಕಿಂತ ಹೆಚ್ಚು ಬುಕ್ಕಿಂಗ್ ಆಗಿರುವುದು ಇದು ಎರಡನೇ ಬಾರಿ. ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಪಂಪಾದಿಂದ ಸನ್ನಿಧಾನದ ವರೆಗೆ ವಿವಿಧ ತಂಡಗಳಾಗಿ ಭಕ್ತರನ್ನು ಕಳುಹಿಸುತ್ತಿದ್ದು, ಈ ತಂಡಗಳಿಗೆ ಪೊಲೀಸರು ಭದ್ರತೆ ನೀಡುತ್ತಿದ್ದಾರೆ.
