“ಎಲ್ಲರ ಮನೆಯಲ್ಲೂ ಶಿವನ ಸ್ಮೃತಿ ತುಂಬಲಿ” : 8ನೇ ದಿನ ಅತಿರುದ್ರ ಮಹಾಯಾಗದಲ್ಲಿ ರಾಜಯೋಗಿನಿ ಬಿ. ಕೆ. ವೀಣಾ ಉಪನ್ಯಾಸ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 01, 2023 ರ ಬುಧವಾರದಂದು ನಡೆದ ಅತಿರುದ್ರ ಮಹಾಯಾಗದ ಎಂಟನೆ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ನ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನನಂದ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಭಾ ಕಾರ್ಯಕ್ರಮದಲ್ಲಿ, ಪ್ರಖ್ಯಾತ ಪ್ರೇರಣಾದಾಯಿ ಮತ್ತು ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬಿ. ಕೆ. ವೀಣಾ, ಶಿರಸಿ, ಉದ್ಯಮಿ ನಾರಾಯಣ ಪೈ, ಬಿಜೆಪಿ ಮಂಗಳೂರಿನ ಪ್ರಭಾರಿಗಳಾದ ಉದಯಕುಮಾರ್ ಶೆಟ್ಟಿ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ವಿಶ್ವವಿಖ್ಯಾತ ಜಾದೂಗಾರರಾದ ಪ್ರೊ. ಶಂಕರ್, ಉದ್ಯಮಿಗಳಾದ ಶಿರಿಯಾರು ಗಣೇಶ್ ನಾಯ್ಕ, ಗ್ಲೋ ಆರ್ಟ್ ಖ್ಯಾತಿಯ ಬೆಂಗಳೂರಿನ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ, ಉಡುಪಿ ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಉದ್ಯಮಿ ಸಂದೇಶ್ ಶೆಟ್ಟಿ, ಉಡುಪಿ ಗುರುಪ್ರಸಾದ್ ಕನ್ಸ್ಟ್ರಕ್ಷನ್ ಮಾಲಕರಾದ ಸತೀಶ್ ಶೇಟ್, ಶೆಟ್ಟಿಬೆಟ್ಟು ವಾರ್ಡ್ ನ ಸದಸ್ಯರಾದ ಅಶ್ವಿನಿ, ಸಗ್ರಿ ವಾರ್ಡ್ ನ ಸದಸ್ಯರಾದ ಭಾರತಿ ಪ್ರಶಾಂತ್, ಇಂದ್ರಾಳಿ ವಾರ್ಡ್ ಸದಸ್ಯರಾದ ಅಶೋಕ್ ನಾಯ್ಕ, ಉಡುಪಿ ನಾಮನಿರ್ದೇಶನದ ಸದಸ್ಯರಾದ ಝುಬೇದ ರವಿ, ಮರಾಠಿ ಸಮುದಾಯದ ಜಿಲ್ಲಾಧ್ಯಕ್ಷರಾದ ಉಮೇಶ್ ನಾಯ್ಕ, ಪರ್ಕಳ ಗರಡಿಯ ಮಾರ್ಗದರ್ಶಕರಾದ ದಿನೇಶ್ ಶೆಟ್ಟಿ, ಪರ್ಕಳ ಬಂಟರ ಚಾವಡಿಯ ಅಧ್ಯಕ್ಷರಾದ ತಾರಾನಾಥ್ ಹೆಗ್ಡೆ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ದೇವಸ್ಥಾನದ ಟ್ರಸ್ಟಿಗಳು ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಹೊಸದಿಗಂತ ಪತ್ರಿಕೆಯ ಸಿ. ಪಿ. ಎಸ್. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಡಾ. ಬಾಲಕೃಷ್ಣ ಮದ್ದೋಡಿ ಸ್ವಾಗತಿಸಿ, ಸಂಜಯ ಪ್ರಭು ವಂದಿಸಿದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಪ್ರಖ್ಯಾತ ಪ್ರೇರಣಾದಾಯಿ ಮತ್ತು ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬಿ. ಕೆ. ವೀಣಾ ಅವರು, ಪರಶಿವನ ಸ್ತುತಿಯನ್ನು ಕೇಳಿದರೆ ಸಾಲದು, ಸ್ಮೃತಿಯನ್ನು ಬೆಳೆಸಿಕೊಳ್ಳಬೇಕು. ಪ್ರತೀದಿನ ಪರಶಿವನನ್ನು ನೆನಪಿಸಿಕೊಂಡರೆ ಪಾಪದಿಂದ ಮುಕ್ತರಾಗಲು ಸಾಧ್ಯವಿದೆ. ಪರಶಿವನು ಸರ್ವಶಕ್ತನಾದವನು, ಸರ್ವರ ಪಿತನಾದವನು. ಭಕ್ತಿ ಕೇವಲ ಆಚರಣೆಯಾಗಬಾರದು. ಆಚರಣೆ ಜೊತೆ ಮನಸ್ಸು ಸೇರಿಕೊಂಡಾಗ, ಮಾನವ ಜೀವನದಲ್ಲಿ ಸುಖ ಶಾಂತಿ ಪಡೆಯುದಕ್ಕೆ ಸಾಧ್ಯ. ಅತಿರುದ್ರ ಮಹಾಯಾಗ ನಡೆಯುತ್ತಿರುವ ಈ ಸುಂದರವಾದ ವಾತಾವರಣಕ್ಕೆ ಬಂದಾಗ, ಕೇವಲ ಶಿವ ಸ್ಮೃತಿ ಜಾಗೃತವಾಗುತ್ತಿರುತ್ತದೆ. ಎಲ್ಲರ ಮನೆಯಲ್ಲೂ ಇಂತಹ ವಾತಾವರಣ ಬರಲಿ. ಎಲ್ಲರ ಮನೆ- ಮನದಲ್ಲಿ ಶಿವನ ನೆನಪು ಜಾಗೃತವಾಗಲಿ. ಎಲ್ಲರ ಮನಸ್ಸು ಸತ್ಯವಾದ ಶಿವಾಲಯವಾಗಲಿ. ಈ ಅತಿರುದ್ರ ಮಹಾಯಾಗ ಸಫಲವಾಗಲಿ ಎಂದು ಶುಭ ಹಾರೈಸಿದರು. ದೇಶ ಮತ್ತು ನಾವು ಸುರಕ್ಷಿತವಾಗಿರಬೇಕಾದರೆ ಈಶನನ್ನು ನೆನಪು ಮಾಡಲೇಬೇಕು. ದೇಶ ಸೇವೆ ಎಷ್ಟು ಮುಖ್ಯವೋ, ಈಶ ಸ್ಮೃತಿ ಅಷ್ಟೇ ಮುಖ್ಯ ಎಂದು ಶಿವ ಧ್ಯಾನದ ಮಹತ್ವವನ್ನು ತಿಳಿಸಿದರು.

ಧಾರ್ಮಿಕ ಉಪನ್ಯಾಸದ ಬಳಿಕ ವಿಶ್ವವಿಖ್ಯಾತ ಜಾದೂಗಾರರಾದ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರಿಂದ “ಜಾಗೃತಿಗಾಗಿ ಜಾದೂ – ಆಧ್ಯಾತ್ಮಿಕ ಜಾದೂ ಪ್ರದರ್ಶನ” ಮತ್ತು ಗ್ಲೋ ಆರ್ಟ್ ಖ್ಯಾತಿಯ ಬೆಂಗಳೂರಿನ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಅವರಿಂದ “ಗಾಳಿಯಲ್ಲಿ ಚಿತ್ತಾರ” ಕಾರ್ಯಕ್ರಮಗಳು ಜರುಗಿತು.

Related Posts

Leave a Reply

Your email address will not be published.