HomeFresh Newsಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ದಿನ 1

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ದಿನ 1

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಶುಭಾರಂಭಗೊಂಡ ಅತಿರುದ್ರ ಮಹಾಯಾಗ, ಮುಂಜಾನೆ ಸಮಯದಲ್ಲಿ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ, ಅರಣೀ ಮಥನಪೂರ್ವಕ ಅಗ್ನಿ ಜನನ, ಸಪರಿವಾರ ಶ್ರೀ ಉಮಾಮಹೇಶ್ವರ ದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ ನೆರವೇರಿತು.

ಮಧ್ಯಾಹ್ನ ವಿವಿಧ ಭಜನಾ ಮಂಡಳಿಗಳಿಂದ “ಭಕ್ತಿ ಮಾಧುರ್ಯ” ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಶ್ರೀ ಉಮಾಮಹೇಶ್ವರ ಸನ್ನಿಧಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ದರ್ಶನವನ್ನು ಮಾಡಿ, ಮಹಾಯಾಗದಲ್ಲಿ ಪಾಲ್ಗೊಂಡು ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.

ಸಾಯಂಕಾಲ ಅತಿರುದ್ರ ಯಾಗಮಂಟಪದಲ್ಲಿ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಿತು. ಇದರೊಂದಿಗೆ ಕು. ಅಕ್ಷಯ ಗೋಖಲೆ ಅವರಿಂದ ಧಾರ್ಮಿಕ ಉಪನ್ಯಾಸ ಮತ್ತು ಜಂಸಾಲೆ ರಾಘವೇಂದ್ರ ಆಚಾರ್ಯ ರವರ ಸಾರಥ್ಯದಲ್ಲಿ “ಯಕ್ಷಗಾನ ವೈಭವ” ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರಲ್ಲಿ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು.

ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಪರೂಪದ “ಅತಿರುದ್ರ ಮಹಾಯಾಗ”ಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮಹಾಯಾಗದ ಸಲುವಾಗಿ ಸರ್ವ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಶಿವಪಾಡಿಯಲ್ಲಿ ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತಿದೆ. ಈ ಸೊಬಗನ್ನು ಜನರು ಮಾರ್ಚ್ 05 ರವರೆಗೆ ಕಣ್ತುಂಬಿಕೊಂಡು ಲೋಕಕಲ್ಯಾಣ ಕಾರ್ಯದಲ್ಲಿ ಪಾಲ್ಗೊಂಡು, ಹೊರೆಕಾಣಿಕೆಯನ್ನು ನೀಡಿ ಮಹಾದೇವನ ಅನುಗ್ರಹಕ್ಕೆ ಪಾತ್ರರಾಗುವ ಸುವರ್ಣ ಅವಕಾಶವಿದು.

ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments