ಧರ್ಮತ್ಥಡ್ಕ: ಕಾಸರಗೋಡು ಜಿಲ್ಲೆಯ ಧರ್ಮತ್ಥಡ್ಕದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲು ಉದ್ದೇಶಿಸಿರುವ ಅಡಿಟೋರಿಯಂಗೆ ಮುಂಬೈ ಉದ್ಯಮಿ ಹಾಗೂ ಸಮಾಜಸೇವಕ ಶ್ರೀ ಸುನಿಲ್ ರಾಜು ಸಾಲಿಯಾನ್ ಅವರು ಕುಲಾಲ ಸಂಘ ಮುಂಬೈ ಪರವಾಗಿ ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಶಾಲೆಯ ಹಳೆಯ ವಿದ್ಯಾರ್ಥಿನಿ ಶುಭಾ ಉದಯ ಗುತ್ತು ಅವರ ಪ್ರಯತ್ನದ ಫಲವಾಗಿ ಈ ಮಹತ್ವದ ನೆರವು ಶಾಲೆಗೆ ದೊರೆತಿದೆ.

ಶುಭಾ ಅವರು ಇದೇ ಶಾಲೆಯಲ್ಲಿ 5ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆದು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಪ್ರಸ್ತುತ ಶಾಲೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಒಟ್ಟಾಗಿ ಸುಮಾರು ₹85 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಅಡಿಟೋರಿಯಂ ನಿರ್ಮಿಸುವ ಯೋಜನೆಯನ್ನು ರೂಪಿಸಿದ್ದಾರೆ.

ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಹಾಗೂ ಇತರ ಚಟುವಟಿಕೆಗಳಿಗೆ ಸೂಕ್ತವಾದ ಅಡಿಟೋರಿಯಂನ ಅಗತ್ಯವಿತ್ತು.

ಈ ಯೋಜನೆಗಾಗಿ ನಡೆದ ಆರಂಭಿಕ ಸಭೆಯಲ್ಲಿ ನಿಧಿ ಸಂಗ್ರಹದ ಕುರಿತು ಚರ್ಚೆ ನಡೆಯಿತು. ಹಳೆಯ ವಿದ್ಯಾರ್ಥಿಗಳಿಂದ ಮಾತ್ರವಲ್ಲದೆ, ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಇತರ ದಾನಿಗಳನ್ನೂ ಸಂಪರ್ಕಿಸಬೇಕು ಎಂಬ ಸಲಹೆಯನ್ನು ಶುಭಾ ಅವರು ಮುಂದಿಟ್ಟರು. ಸಭೆಯಲ್ಲಿ ಅವರಿಗೆ ನಿಧಿ ಸಂಗ್ರಹಿಸುವ ಜವಾಬ್ದಾರಿಯನ್ನು ನೀಡಲಾಯಿತು.

ತಮ್ಮ ಉದ್ಯೋಗದ ಜೊತೆಗೆ ವಾರಾಂತ್ಯಗಳನ್ನು ಮೀಸಲಿಟ್ಟು, ಪರಿಚಯಸ್ಥರನ್ನು ಸಂಪರ್ಕಿಸಿ ಶಾಲೆಯ ಯೋಜನೆಯ ಬಗ್ಗೆ ಮಾಹಿತಿ ನೀಡಲು ಆರಂಭಿಸಿದರು. ಮೊದಲ ವಾರಾಂತ್ಯದಲ್ಲೇ ಸುಮಾರು ₹20,000ರಿಂದ ₹25,000 ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದ ಮುಂಬೈಯ ಸುನಿಲ್ ಸಾಲಿಯಾನ್ ಅವರ ನೆನಪಾಯಿತು. ತಮ್ಮ ಮಾವ ರವಿ ಕುಲಾಲ್ ಅವರ ಮೂಲಕ ಪರಿಚಯವಾಗಿದ್ದ ಸುನಿಲ್ ಅವರನ್ನು ನೇರವಾಗಿ ಸಂಪರ್ಕಿಸಲು ಆರಂಭದಲ್ಲಿ ಹಿಂಜರಿಕೆಯಿದ್ದರೂ, ಶಾಲೆಯ ಯೋಜನೆಯ ಕುರಿತು ವಾಟ್ಸಾಪ್ ಧ್ವನಿ ಸಂದೇಶದ ಮೂಲಕ ನೆರವು ಕೋರಿದರು.

ಮೊದಲ ಎರಡು ದಿನ ಯಾವುದೇ ಪ್ರತಿಕ್ರಿಯೆ ಬಾರದಿದ್ದರೂ, ಶುಭಾ ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಮತ್ತೆ ಸಂದೇಶ ಕಳುಹಿಸಿದಾಗ ಸುನಿಲ್ ಸಾಲಿಯಾನ್ ಅವರು ಸ್ವತಃ ಕರೆ ಮಾಡಿ ಯೋಜನೆಯ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಶುಭಾ ಅವರಿಂದ ನಿರೀಕ್ಷಿತ ನೆರವಿನ ಮೊತ್ತವನ್ನು ಕೇಳಿದಾಗ, ಅವರು ಪ್ರಾಮಾಣಿಕವಾಗಿ ಸುಮಾರು ₹5,000 ನಿರೀಕ್ಷಿಸಿರುವುದಾಗಿ ತಿಳಿಸಿದರು. ಆದರೆ ಅಚ್ಚರಿಯ ರೀತಿಯಲ್ಲಿ ಮರುದಿನವೇ ಸುನಿಲ್ ಅವರು ₹50,000 ದೇಣಿಗೆಯನ್ನು ಶಾಲೆಯ ಖಾತೆಗೆ ವರ್ಗಾಯಿಸಿದರು. ಅಲ್ಲದೆ ಮುಂದೆಯೂ ಯೋಜನೆಗೆ ನಿರಂತರ ಸಹಕಾರ ನೀಡುವ ಭರವಸೆ ನೀಡಿದರು.
ನಂತರದ ದಿನಗಳಲ್ಲಿ ಈ ಯೋಜನೆಯ ಕುರಿತು ಇಬ್ಬರ ನಡುವೆ ನಿರಂತರ ಮಾತುಕತೆ ನಡೆಯಿತು. ಸುನಿಲ್ ಸಾಲಿಯಾನ್ ಅವರಿಗೆ ತಮ್ಮ ತಾಯಿಯವರ ಮೇಲೆ ಅಪಾರ ಪ್ರೀತಿ ಮತ್ತು ಗೌರವವಿದ್ದು, ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಆಸಕ್ತಿಯೂ ಇದೆ.
ಇತ್ತೀಚೆಗೆ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಮುಖ್ಯೋಪಾಧ್ಯಾಯರೊಂದಿಗೆ ಸುನಿಲ್ ಅವರನ್ನು ಭೇಟಿಯಾಗಿ ಯೋಜನೆಯ ಸಂಪೂರ್ಣ ವಿವರಗಳನ್ನು ನೀಡಿದರು. ಬಳಿಕ ಅವರು ಶಾಲೆಗೆ ಭೇಟಿ ನೀಡಿ ಅಲ್ಲಿನ ವಾತಾವರಣ, ವಿದ್ಯಾರ್ಥಿಗಳ ಸಂಖ್ಯೆ ಮತ್ತು ಗ್ರಾಮೀಣ ಭಾಗದಲ್ಲಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯ ಕಾರ್ಯವೈಖರಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಕುಲಾಲ ಸಂಘ ಮುಂಬೈ ಪರವಾಗಿ ಅಡಿಟೋರಿಯಂ ನಿರ್ಮಾಣಕ್ಕೆ ₹10 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.
ಸುನಿಲ್ ಸಾಲಿಯಾನ್ ಅವರು ಮುಂಬೈಯಲ್ಲಿ ನೆಲೆಸಿದ್ದರೂ ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಕುಲಾಲ ಭವನದ ಅಭಿವೃದ್ಧಿಗೆ ₹50 ಲಕ್ಷಕ್ಕೂ ಅಧಿಕ ನೆರವು ನೀಡಿರುವ ಅವರು, ಬಡ ಮಕ್ಕಳ ಶಿಕ್ಷಣಕ್ಕೂ ಸಹಾಯಹಸ್ತ ಚಾಚುತ್ತಿದ್ದಾರೆ. ಪ್ರತಿವರ್ಷ ತಮ್ಮ ಜನ್ಮದಿನವನ್ನು ಆಶ್ರಮಗಳಲ್ಲಿ ಆಚರಿಸುವುದು, ಜನರೊಂದಿಗೆ ಸಂತೋಷ ಹಂಚಿಕೊಳ್ಳುವುದು ಹಾಗೂ ಇತರರನ್ನು ಪ್ರವಾಸಕ್ಕೆ ಕರೆದೊಯ್ಯುವಂತಹ ವಿಭಿನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.
“ಶ್ರೀ ಸುನಿಲ್ ಸಾಲಿಯಾನ್ ಅವರ ಸರಳತೆ, ಆತ್ಮೀಯತೆ ಮತ್ತು ಸಹಾಯ ಮಾಡುವ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಆರಂಭದಲ್ಲಿ ಅವರನ್ನು ಸಂಪರ್ಕಿಸಲು ಹಿಂಜರಿದಿದ್ದ ನನಗೆ, ಅವರು ನೀಡಿದ ಆತ್ಮೀಯತೆ ಮತ್ತು ವಿಶ್ವಾಸದಿಂದ ಅವರು ಕೇವಲ ದಾನಿಗಳಾಗಿ ಉಳಿಯದೆ ನನ್ನ ಪಾಲಿಗೆ ಅಣ್ಣನಂತಾಗಿದ್ದಾರೆ. ಅವರೊಂದಿಗೆ ಬೆಳೆದ ಈ ಆತ್ಮೀಯ ಸಂಬಂಧ ಸದಾ ಸ್ಮರಣೀಯ” ಎಂದು ಶುಭಾ ಉದಯ ಗುತ್ತು ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ಸಣ್ಣ ವಾಟ್ಸಾಪ್ ಸಂದೇಶದಿಂದ ಆರಂಭವಾದ ಈ ಪ್ರಯತ್ನ ಇಂದು ಗ್ರಾಮೀಣ ಭಾಗದ ನೂರಾರು ಮಕ್ಕಳ ಕನಸಿಗೆ ಆಸರೆಯಾಗುವ ಮಹತ್ವದ ಕೊಡುಗೆಯಾಗಿ ಬೆಳೆದಿದೆ.
ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸುನಿಲ್ ರಾಜು ಸಾಲಿಯಾನ್ ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು. ಅವರ ಸಮಾಜಸೇವಾ ಕಾರ್ಯಗಳು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಹಾಗೂ ಅವರಿಂದ ಇನ್ನೂ ಅನೇಕ ಜನರ ಬದುಕಿನಲ್ಲಿ ಸಂತೋಷ ಮೂಡಲಿ ಎಂಬುದು ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹಿತೈಷಿಗಳ ಹಾರೈಕೆ

