HomeFresh Newsಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಹೈಕೋರ್ಟ್...

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್. ರಾಮಕೃಷ್ಣ ಅವರ ಹತ್ಯೆ ಪ್ರಕರಣದ ತೀರ್ಪನ್ನು ರಾಜ್ಯ ಹೈ ಕೊರ್ಟು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಸೇರಿದಂತೆ 6 ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

2011ರ ಏಪ್ರಿಲ್ ತಿಂಗಳಿನಲ್ಲಿ ಎ.ಎಸ್. ರಾಮಕೃಷ್ಣ ಸುಳ್ಯ ನಗರದ ರಸ್ತೆಯೊಂದರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಮುಖ ಆರೋಪಿ ರೇಣುಕಾ ಪ್ರಸಾದ್ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ 2016ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ದ ರಾಜ್ಯ ಸರ್ಕಾರ (ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾ ಪ್ರಸಾದ್, ಮನೋಜ್ ರೈ, ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ.ಎಸ್.ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್.ಯು ನಾಗೇಶ್ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಮಾನ್ಯ ಮಾಡಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅ.5ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸ್ಪ್ಲಿಂಟರ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕರಾಗಿದ್ದರು. ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಕೆ ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಿಭಜನೆ ಮಾಡಿ ಕೊಟ್ಟಿದ್ದರು. ಎ ಎಸ್ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್, ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ಅವರು ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು.

2011ರ ಏಪ್ರಿಲ್ 28ರಂದು ಬೆಳಗ್ಗೆ 7.45ರ ವೇಳೆಯಲ್ಲಿ ಅಂಬೆತಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ರೇಣುಕಾ ಪ್ರಸಾದ್ ಮೊದಲ ಆರೋಪಿಯಾಗಿದ್ದು ಒಟ್ಟು ಏಳು ಆರೋಪಿಗಳಿದ್ದರು. ಸಾಕ್ಷ್ಯಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅಕ್ಟೋಬರ್ 21ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸರ್ಕಾರ 2017ರಲ್ಲಿ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು. ಇದೀಗ ರೇಣುಕಾಪ್ರಸಾದ್ ಹಾಗೂ ಇತರೆ ಐವರು ಆರೊಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್, ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಕೃತ್ಯದಲ್ಲಿ ದೋಷಿ ಎಂದು ತೀರ್ಮಾನಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments