ಮಂಗಳೂರು: ಶೈಕ್ಷಣಿಕ ಶ್ರೇಷ್ಠತೆಯ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ ಹಾಗೂ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ, ಎಸ್.ಜೆ. ಅವರು 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಗೆ’ ಭಾಜನರಾಗಿದ್ದಾರೆ.

ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನವೆಂಬರ್ 20ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ “ವತಿಯಿಂದ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಜಿತೇಂದ್ರ ಕುಮಾರ್ ಮಿಶ್ರಾ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಜಾಗತಿಕ ನಾಗರಿಕತ್ವ ಮತ್ತು ಅಂತರರಾಷ್ಟ್ರೀಯ ಕಲಿಕೆಯಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾದ 100 ಶಾಲೆಗಳ ಪೈಕಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯೂ ಒಂದಾಗಿದೆ. ಅಂತರರಾಷ್ಟ್ರೀಯ ಸಹಯೋಗವು ಈ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಪ್ರಮುಖ ವೈಶಿಷ್ಟ್ಯವಾಗಿದೆ. ಜಗತ್ತಿನ ವಿವಿಧ ದೇಶಗಳ ಜೆಸ್ವಿಟ್ ಶಾಲೆಗಳೊಂದಿಗೆ ಆನ್‌ಲೈನ್ ಸಹಯೋಗ, ಅಂತರ್‌ಸಾಂಸ್ಕೃತಿಕ ಕಲಿಕಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅನುಭವವನ್ನು ಒದಗಿಸಲಾಗುತ್ತಿದೆ.
ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ, ಎಸ್.ಜೆ. ಅವರಿಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ, ಸಮರ್ಪಿತ ಸೇವೆ ಹಾಗೂ ಸಮಾಜದ ಬಗೆಗಿನ ಬದ್ಧತೆಯನ್ನು ಗುರುತಿಸಿ ವೈಯಕ್ತಿಕವಾಗಿ “ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಗೊನ್ಝಾಗ ಶಾಲೆ ಹಾಗೂ ಶಾಲಾ ಪ್ರಾಂಶುಪಾಲರು ಒಂದೇ ಸಂದರ್ಭದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕವಾಗಿ ಸಾಧನೆಗೈದ, ಭಾವನಾತ್ಮಕವಾಗಿ ಸಮತೋಲನ ಹೊಂದಿದ, ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಹಾಗೂ ಸಾಮಾಜಿಕ ಜವಾಬ್ದಾರಿಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಶಾಲೆಯ ಬದ್ಧತೆಗೆ ಈ
ಗೌರವ ಮತ್ತಷ್ಟು ಮೆರುಗು ನೀಡಿದೆ.
ಈ ಅವಳಿ ಪ್ರಶಸ್ತಿಗಳು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸಂಪೂರ್ಣ ಕುಟುಂಬದಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿವೆ.

