HomeFresh Newsಮಾನ್ಸೂನ್ ಪರಿಣಾಮಗಳನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಸೂಚನೆ

ಮಾನ್ಸೂನ್ ಪರಿಣಾಮಗಳನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಸೂಚನೆ

ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳಲ್ಲಿ ಜೀವ ಹಾನಿ, ಆಸ್ತಿ ಹಾನಿ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇ 23, 2023 ರ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿಂದೆ ಬಾಧಿಸಿದ್ದ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ವಿಕೋಪದ ಮುನ್ಸೂಚನೆಗಳು ಈಗಾಗಲೇ ದೊರೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ, ಕಳೆದ ವರ್ಷಗಳಲ್ಲಿ ಸಂಭವಿಸಿರುವ ನೆರೆ ಪ್ರದೇಶಗಳನ್ನು ಗುರುತಿಸಿ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಮುಂದಾಗಬೇಕು. ತಾಲೂಕು ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಸಭೆಗಳನ್ನು ಮಾಡುವುದರ ಜೊತೆಗೆ ಸಕಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು, ತೊಂದರೆಗೊಳಗಾದವರಿಗೆ ತಕ್ಷಣದಲ್ಲಿ ಸ್ಪಂದಿಸಲು ಮುಂದಾಗಬೇಕು. ಪ್ರತೀ ತಾಲೂಕಿನಲ್ಲಿಯೂ ಪ್ರಕೃತಿ ವಿಕೋಪಗಳನ್ನು ಯಾವ ರೀತಿಯಲ್ಲಿ ತಂಡಗಳು ಎದುರಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ಅಭ್ಯಾಸಗಳನ್ನು ಕೈಗೊಳ್ಳುವುದರಿಂದ, ವಿಕೋಪ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುವುದರ ಜೊತೆಗೆ ತಮಗೆ ಅಗತ್ಯವಿರುವ ಸುರಕ್ಷಿತಾ ಪರಿಕರಗಳ ಉಪಯೋಗದ ಬಗ್ಗೆಯೂ ಸಹ ಅನುಭವ ದೊರೆಯಲಿದೆ ಎಂದರು.

ನಗರ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ, ತೋಡುಗಳನ್ನು ಸ್ವತ್ಛಗೊಳಿಸ ಬೇಕು. ಗ್ರಾಮಗಳಲ್ಲಿರುವ ತೆರೆದ ಬಾವಿ/ಕೆರೆ ಗಳು ಹಾಗೂ ನೀರಿನ ಗುಂಡಿಗಳ ಸುತ್ತ ತಡೆಬೇಲಿ ಹಾಕಿಸಿ, ಎಚ್ಚರಿಕೆ ಫ‌ಲಕ ಅಳವಡಿಸಬೇಕು. ರಾ.ಹೆ.ಯಲ್ಲಿ ಮಳೆ ನೀರಿನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಶಾಲೆ, ಅಂಗನವಾಡಿ ಕಟ್ಟಡಗಳ ಪರಿಸ್ಥಿತಿ ಪರಿಶೀಲಿಸಬೇಕು. ಈಗಾಗಲೇ ಕೈಗೊಂಡಿರುವ ದುರಸ್ತಿ ಕಾರ್ಯಗಳನ್ನು ವಾರದ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಪ್ರವಾಸಿ ತಾಣಗಳಲ್ಲಿ ಸುರಕ್ಷೆಗೆ ಆದ್ಯತೆ ನೀಡಬೇಕು. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಶೀಘ್ರದಲ್ಲಿಯೇ ತೆರವುಗೊಳಿಸಬೇಕು. ಬೀದಿ ದೀಪಗಳನ್ನು ಅಳವಡಿಸಬೇಕು, ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣ ಸ್ಪಂದಿಸಬೇಕು ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ 14, ಗ್ರಾಮೀಣ ವ್ಯಾಪ್ತಿಯಲ್ಲಿ 32 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎಂದು ಉಡುಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ 38 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜದ ದಾಸ್ತಾನು ಇಟ್ಟುಕೊಳ್ಳಬೇಕು. ರಸಗೊಬ್ಬರ ದಾಸ್ತಾನು ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಡುಪಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿ.ಪಂ. ಸಿಇಒ ಪ್ರಸನ್ನ ಎಚ್‌., ಉಡುಪಿ ಎಸ್ಪಿ ಹಾಕೇ ಅಕ್ಷಯ್‌ ಮಚ್ಚೀಂದ್ರ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments