ವಿಶ್ವ ಪರಿಸರ ದಿನಾಚರಣೆ : ಕಾಂಡ್ಲಾ ಸಸಿ ನೆಟ್ಟ ಶೋಭಾ ಕರಂದ್ಲಾಜೆ

ಉಡುಪಿ : ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿ ಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೋಟ್ ಮೂಲಕ ತೆರಳಿ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿದ ಬಳಿಕ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಶೇ.20 ಅರಣ್ಯ ನಾನಾ ಕಾರಣಗಳಿಂದ ನಾಶವಾಗುತ್ತಿದೆ. ಇದನ್ನು ತಡೆಯಲು ಸರಕಾರ, ಇಲಾಖೆ, ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ. ಜನರಿಗೆ ಅನುಕೂಲವಾಗುವಂತೆ ಸಿಆರ್‌ಝೆಡ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಕ್ರಮ ವಹಿಸಲಿದೆ. ಕಾಂಡ್ಲಾ ಗಿಡಗಳು ಸುನಾಮಿಯಂತಹ ಪರಿಸರದ ವ್ಯತ್ಯಯಗಳನ್ನು ತಡೆಯುತ್ತದೆ. ಕಾಂಡ್ಲಾ ವನದ ಹಸಿರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುವುದಲ್ಲದೆ ಜಲಚರಗಳಿಗೆ ಆವಾಸ ಸ್ಥಾನವಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ದೇಶದಲ್ಲಿ ಪರಿಸರ ಉಳಿಸುವ, ಅರಣ್ಯ ಬೆಳೆಸುವ ಹಾಗೂ ಸ್ವಚ್ಚತಾ ಕಾರ್ಯ ನಡೆಸುವ ಕಾರ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಲಾಡಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಸಹಕರಿಸುತ್ತಿರುವ ಸುರೇಶ್ ದೇವಾಡಿಗ ಹಾಗೂ ಕಡಲಾಮೆ ಸಂರಕ್ಷಣೆಯಲ್ಲಿ ಸಹಕಾರ ನೀಡುತ್ತಿರುವ ಬಾಬು ಮೊಗವೀರ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಕರಾವಳಿ ನಿಯಂತ್ರಣಾ ವಲಯದ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್., ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ.ಕಿರಣ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.