HomeFresh Newsಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೊದಲ ಬಾರಿಗೆ : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ...

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೊದಲ ಬಾರಿಗೆ : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ನವೀನ ಎಂಡೋಸ್ಕೋಪಿ (ಈ ಯು ಎಸ್ – ಗ್ಯಾಸ್ಟ್ರೊಜೆಜುನ್ಸೋಟಮಿ)

ಉಡುಪಿ : ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಡಾ. ಗಣೇಶ್ ಭಟ್, ಡಾ. ಅತಿಶ್ ಶೆಟ್ಟಿ, ಡಾ. ಬಾಲಾಜಿ ಮತ್ತು ಡಾ. ಸಂದೇಶ್ ಶೇಟ್ (ಅರಿವಳಿಕೆ) ಇವರುಗಳು ಎಂಡೋಲ್ಟ್ರಾಸೌಂಡ್ ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೋಮಿ ಎಂಬ ಸಂಕೀರ್ಣ ವಿನೂತನ ಎಂಡೋಸ್ಕೋಪಿ ಕಾರ್ಯವಿಧಾನ (ಶಸ್ತ್ರಚಿಕಿತ್ಸೆ)ಯನ್ನು ಉಡುಪಿ ಜಿಲ್ಲೆಯ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಇತ್ತೀಚೆಗೆ ನಡೆಸಲಾಯಿತು. ಕ್ಯಾನ್ಸರ್ ನಿಂದಾಗಿ ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯನ್ನು ಹೊಂದಿರುವ ವ್ಯಕ್ತಿಗೆ ಯಶಸ್ವಿಯಾಗಿ ಈ ಕಾರ್ಯವಿಧಾನ ನಡೆಸಿದರು. ಈ ವಿಧಾನವು ಶಸ್ತ್ರಚಿಕಿತ್ಸೆಗಿಂತ ಕಡಿಮೆ ಆಕ್ರಮಣಕಾರಿಯಾಗಿದೆ ಮತ್ತು ಯಾವುದೇ ಶಸ್ತ್ರಚಿಕಿತ್ಸೆಗೆ ಸರಿಹೊಂದದ ರೋಗಿಗಳಿಗೆ ಇದು ಸೂಕ್ತ ವಿಧಾನವಾಗಿದೆ. ಎಂಡೋಸ್ಕೋಪಿಯ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಮತ್ತು ಇದನ್ನು ಶಸ್ತ್ರಚಿಕಿತ್ಸೆಗಿಂತ ತುಂಬಾ ಕಡಿಮೆ ವೆಚ್ಚದಲ್ಲಿ ಮಾಡಬಹುದಾಗಿದೆ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮತ್ತು ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯೊಂದಿಗೆ ನಿರಂತರ ವಾಂತಿ ಆಗುತ್ತಿದ್ದ 55 ವರ್ಷ ವಯಸ್ಸಿನ ಪುರುಷನನ್ನು ಮತ್ತೊಂದು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಿದ್ದರು. ಇಲ್ಲಿನ ವೈದ್ಯರ ತಂಡ ಮತ್ತು ರೋಗಿಯ ಸಂಬಂಧಿಕರೊಂದಿಗೆ ಮಾತುಕತೆ ಮತ್ತು ಚರ್ಚೆಯ ನಂತರ, ಆಹಾರದ ಸುಲಭ ಮಾರ್ಗಕ್ಕಾಗಿ ಈ ಯು ಎಸ್ – ಗ್ಯಾಸ್ಟ್ರೋಜೆಜುನೋಸ್ಟೊಮಿ (ಹೊಟ್ಟೆ ಮತ್ತು ಸಣ್ಣ ಕರುಳಿನ ನಡುವಿನ ಸಂಪರ್ಕ) ಎಂಬ ವಿಶಿಷ್ಟವಾದ ಎಂಡೋಸ್ಕೋಪಿಕ್ ವಿಧಾನವನ್ನು ನಿರ್ವಹಿಸಲು ನಿರ್ಧರಿಸಲಾಯಿತು. ಕಾರ್ಯವಿಧಾನದ ನಂತರ ರೋಗಿಯು ಮೌಖಿಕ ಆಹಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿತ್ತು. ಕರ್ನಾಟಕದ ಕರಾವಳಿ ಭಾಗದಲ್ಲಿ ಇದು ಮೊದಲನೆಯದ್ದಾಗಿದೆ.

ಈ ಕುರಿತು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಶಿರನ್ ಶೆಟ್ಟಿ ಮಾತನಾಡಿ, “ಹೊಸ ತಂತ್ರಜ್ಞಾನದಿಂದಾಗಿ ವಿವಿಧ ಸಂಕೀರ್ಣ ರೋಗಗಳಿಗೆ ಎಂಡೋಸ್ಕೋಪಿ ಕಾರ್ಯವಿಧಾನಗಳ ಮೂಲಕವೇ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಮತ್ತು ಇದು ರೋಗಿಸ್ನೇಹಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಇದನ್ನು ನಿರ್ವಹಿಸಬಹುದಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಗ್ರಾಮೀಣ ಮಟ್ಟದ ಮತ್ತು ಬಡ ಹಿನ್ನೆಲೆಯ ರೋಗಿಗಳ ನಿರ್ವಹಣೆಗಾಗಿ ಇಂತಹ ಹೊಸ ಎಂಡೋಸ್ಕೋಪಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಭಾರತದ ಮೊದಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಒಂದಾಗಿದೆ” ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು ಈ ವಿನೂತನ ಪ್ರಕ್ರಿಯೆಯಲ್ಲಿ ತೊಡಗಿರುವ ವೈದ್ಯರು ಮತ್ತು ಸಿಬ್ಬಂದಿಯ ತಂಡವನ್ನು ಶ್ಲಾಘಿಸಿದರು. ನಂತರ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, “ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೇಂದ್ರಗಳಿಗೆ ಸಮಾನವಾದ ಎಲ್ಲಾ ಪ್ರಮುಖ ಮತ್ತು ಸಂಕೀರ್ಣ ಎಂಡೋಸ್ಕೋಪಿಕ್ ಕಾರ್ಯವಿಧಾನಗಳನ್ನು ನಿರ್ವಹಿಸುತ್ತಿದೆ ಮತ್ತು ಇದರಿಂದ ಕರಾವಳಿ ಮತ್ತು ಮಧ್ಯ ಕರ್ನಾಟಕ ರೋಗಿಗಳಲ್ಲಿ ಹೊಸ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments