ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಭತ್ತದ ಪೈರುಗಳ ನಾಶ-ಅಪಾರ ಬೆಳೆ ಹಾನಿ
ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಕಾಪು ತಾಲೂಕಿನ ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ಗದ್ದೆಯಲ್ಲಿ ನಾಶಗೊಂಡ ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಭೀತಿಯನ್ನು ಎದುರಿಸುವಂತಾಗಿದೆ.
ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರುಗಳು ಮಕಾಡೆ ಮಲಗಿದ್ದು ಇದರಿಂದಾಗಿ ಭತ್ತದ ಕೃಷಿಕರು ತಾವು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಸುರಕ್ಷಿತಾವಗಿ ಮನೆಯೊಳಗೆ ತರಲಾಗದೇ ಕಂಗಾಲಾಗಿದ್ದಾರೆ.
ಕಾಪು ತಾಲೂಕಿನ ಕಾಪು, ಮಜೂರು, ಕಳತ್ತೂರು, ಮಲ್ಲಾರು, ಎರ್ಮಾಳ್ ಸಹಿತವಾಗಿ ಹೊಳೆ ಬದಿಯಲ್ಲಿರುವ ಭತ್ತದ ಗದ್ದೆಗಳಲ್ಲಿ ಮಳೆ ನೀರು ನಿಂತುಕೊಂಡಿದ್ದು ಭತ್ತದ ಪೈರು ಗಳು ನೀರಿನಲ್ಲಿ ತೇಲುತ್ತಿವೆ. ಮೊದಲೇ ನೀರು ನಿಂತಿದ್ದ ಗದ್ದೆಗಳಲ್ಲಿ ಮತ್ತೆ ಮಳೆ ನೀರು ಸಂಗ್ರಹಗೊಂಡ ಪರಿಣಾಮ ಗದ್ದೆಯಲ್ಲೇ ಭತ್ತ ಮೊಳೆಕೆಯೊಡೆಯಲಾರಂಭಿಸಿದೆ.
ಗ್ರಾಮೀಣ ಪ್ರದೇಶಗಳ ಬಹುತೇಕ ಕಡೆಗಳಿಗೆ ಗ್ರಾಮಕ್ಕೆ ಒಂದು, ಎರಡರಂತೆ ಈಗಾಗಲೇ ಬಾಡಿಗೆ ಕೊಯ್ಲು ಯಂತ್ರಗಳು ಬಂದಿವೆಯಾದರೂ ಅದನ್ನು ಕೂಡಾ ಸಮರ್ಪಕವಾಗಿ ಬಳಸಿಕೊಳ್ಳಲಾಗದ ಸಂದಿಗ್ಧತೆ ರೈತರನ್ನು ಕಾಡುತ್ತಿದೆ. ಮಳೆಯಿಂದ ಹಾಳಾಗಿರುವ ಭತ್ತದ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ದೊರಕಿಸಿ ಕೊಡುವಂತೆ ಕೃಷಿಕರು ಆಗ್ರಹಿಸುತ್ತಿದ್ದಾರೆ.