ಅಪಘಾತದಲ್ಲಿ ಗಂಭೀರ ಗಾಯಗೊಂಡ ಛಾಯಾಗ್ರಾಹಕ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಕುಂದಾಪುರ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡ ಛಾಯಾಗ್ರಾಹಕನೋರ್ವ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.

ನಾವುಂದದ ಮಾನಸ ಸ್ಟೂಡಿಯೋ ಮಾಲೀಕ ಹೇರೂರು ಅಶೋಕ್ ಶೆಟ್ಟಿ (58) ಸಾವನ್ನಪ್ಪಿದವರು. ಅಶೋಕ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಫೋಟೋಗ್ರಫಿ ಮುಗಿಸಿ ಭಾನುವಾರ ತಡರಾತ್ರಿ ತಮ್ಮ ಕಾರಿನಲ್ಲಿ ಪುತ್ರ ಪನ್ನಗ ಶೆಟ್ಟಿ ಹಾಗೂ ಇನ್ನೋರ್ವ ಛಾಯಾಗ್ರಾಹಕ ಕುಮಾರ್ ಜೊತೆ ಮನೆಗೆ ಬರುತ್ತಿರುವ ವೇಳೆಯಲ್ಲಿ ಸೋಮವಾರ ನಸುಕಿನ ಜಾವ ಈ ಅವಘಡ ನಡೆದಿತ್ತು. ಕಾರು ತಮಕೂರು ಸಮೀಪದ ತಾವರೆಕೆರೆ ಸಮೀಪಿಸುತ್ತಿದ್ದಂತೆಯೇ ಎದುರುಗಡೆಯಿಂದ ಸಾಗುತ್ತಿರುವ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಕಾರು ಚಲಾಯಿಸುತ್ತಿದ್ದ ಪನ್ನಗ ಶೆಟ್ಟಿ ಹಾಗೂ ಮುಂದೆ ಕುಳಿತಿದ್ದ ಅಶೋಕ್ ಶೆಟ್ಟಿಯವರಿಗೆ ಗಂಭೀರ ಗಾಯಗಳಾಗಿತ್ತು. ಕಾರಿನ ಹಿಂಬದಿ ಕುಳಿತಿದ್ದ ಇನ್ನೋರ್ವ ಛಾಯಾಗ್ರಾಹಕ ಕುಮಾರ್ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದರು.

ಗಂಭೀರ ಗಾಯಗೊಂಡ ಅಶೋಕ್ ಶೆಟ್ಟಿಯವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಭಾಗಕ್ಕೆ ಬಲವಾದ ಪೆಟ್ಟು ತಗುಲಿದ್ದರಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಪುತ್ರ ಪನ್ನಗ ಶೆಟ್ಟಿಯವರನ್ನು ಸೋಮವಾರವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ, ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಅಶೋಕ್ ಕುಮಾರ್ ಶೆಟ್ಟಿಯವರ ಮೃತದೇಹ ತುಮಕೂರಿನ ಆಸ್ಪತ್ರೆಯಲ್ಲಿದ್ದು ಮೃತದೇಹವನ್ನು ಮನೆಗೆ ತರುವ ಪ್ರಕ್ರಿಯೆಗಳು ನಡೆಯುತ್ತಿದೆ. ಬೈಂದೂರು ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹಾಗೂ ಕುಂದಾಪುರ ಛಾಯಾಗ್ರಾಹಕ ಸಂಘದ ಅಧ್ಯಕ್ಷ ರಾಜು ದೇವಾಡಿಗ ಮಠದಬೆಟ್ಟು ಸೇರಿದಂತೆ ಸಂಘದ ಪದಾಧಿಕಾರಿಗಳು ತುಮಕೂರಿನಲ್ಲಿದ್ದು ಮೃತದೇಹ ಮನೆಗೆ ತರುವ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಪಾದರಸದಂತಹ ಚುರುಕಿನ ವ್ಯಕ್ತಿತ್ವದ ಅಶೋಕ್ ಕುಮಾರ್ ಶೆಟ್ಟಿಯವರು ಕುಂದಾಪುರ ತಾಲೂಕು ಛಾಯಾಗ್ರಾಹಕ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಜಿಲ್ಲಾ ಛಾಯಾಗ್ರಾಹಕ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲಾಕ್ ಡೌನ್ ನಿಂದಾಗಿ ಛಾಯಾಗ್ರಾಹಕರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಇತ್ತೀಚೆಗಷ್ಟೇ ಕುಂದಾಪುರದ ಛಾಯಾಗ್ರಾಹಕ ಸಂಘದೊಡದೆ ಶಿವಮೊಗ್ಗಕ್ಕೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹಾಗೂ ಅಪಾರ ಸ್ನೇಹ ಬಳಗವನ್ನು ಅಗಲಿದ್ದಾರೆ. ಚುರುಕಿನ ವ್ಯಕ್ತಿತ್ವದ ಅಶೋಕ್ ಶೆಟ್ಟಿಯವರ ಸಾವಿಗೆ ಕುಂದಾಪುರ ಛಾಯಾಗ್ರಾಹಕ ಸಂಘವು ಕಂಬನಿ ಮಿಡಿದಿದೆ.

 

Related Posts

Leave a Reply

Your email address will not be published.