ಉಡುಪಿ:
ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಕಾರ್ಮಿಕ ಅಧಿಕಾರಿ ಶ್ರೀ ಕಮಲ್ ಶಾ ಅಲ್ತಾಫ್ ಅಹ್ಮದ್ ಅವರು ಮಾತನಾಡಿ, ದೇಹವನ್ನು ನಾವು ಸ್ವಚ್ಛವಾಗಿ ಇಡುವಂತೆ ಸಮಾಜವನ್ನೂ ಸಹ ಸ್ವಚ್ಛವಾಗಿ ಇಡುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ. ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಗಳಾದ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷ ತಂದಿದೆ ಎಂದರು.
ಗೌರವ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಕಾರ್ಮಿಕ ಅಧಿಕಾರಿ ಶ್ರೀ ವಿಜಯೇಂದ್ರ ಅವರು ಕಾರ್ಮಿಕ ಕಾನೂನುಗಳ ಬಗ್ಗೆ ವಿವರವಾಗಿ ತಿಳಿಸಿದರು. ಮತ್ತೋರ್ವ ಗೌರವ ಅತಿಥಿಯಾದ ಉಡುಪಿಯ ಕಾರ್ಮಿಕ ಅಧಿಕಾರಿ ಶ್ರೀ ಮಲ್ಲಿಕ್ ಪ್ರಸಾದ್ ಅವರು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನೇತ್ರಜ್ಯೋತಿ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು, ಕಾರ್ಮಿಕರಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ದೇಶ ಕಟ್ಟುವಲ್ಲಿ ಇವರ ಪಾತ್ರ ಅಮೋಘವಾದದ್ದು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್ ಅವರು, ಸ್ವಚ್ಛ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದೆ. ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿರುವುದು ಸಂತೋಷ ತಂದಿದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಸಿಒಒ ಡಾ. ಗೌರಿ ಪ್ರಭು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಅನಿಷಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಶ್ರೀ ಮಧ್ವ ವಲ್ಲಭ ಸ್ವಾಗತಿಸಿದರು. ಶ್ರೀ ಮಾಧವ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮುನ್ಸಿಪಾಲಿಟಿ ಕರ್ಮಚಾರಿಗಳಾದ ಶ್ರೀ ಆನಂದ, ಶ್ರೀ ಮಹದೇವ್, ಶ್ರೀ ಸುರೇಶ್, ಶ್ರೀ ರಾಜೇಶ್ ಹಾಗೂ ನೇತ್ರಜ್ಯೋತಿ ಕಾಲೇಜು ಮತ್ತು ಪ್ರಸಾದ್ ನೇತ್ರಾಲಯ ಉಡುಪಿಯ ಸ್ವಚ್ಛತಾ ಸಿಬ್ಬಂದಿಗಳಾದ ಶ್ರೀಮತಿ ಜಯಂತಿ, ಶ್ರೀಮತಿ ವನಜ, ಶ್ರೀಮತಿ ಸುಮಾ, ಶ್ರೀಮತಿ ಲಲಿತಾ ಮತ್ತು ಶ್ರೀಮತಿ ವಿನಯ ಅವರನ್ನು ಸನ್ಮಾನಿಸಲಾಯಿತು.
ನೇತ್ರಜ್ಯೋತಿ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ
RELATED ARTICLES
