ಆಸ್ಕರ್ ಅವರ ಮೂಲ ಮನೆಯಲ್ಲಿ ಪಾರ್ಥಿವ ಶರೀರ ಇರಿಸಿ ಪ್ರಾರ್ಥನೆ
ಉಡುಪಿ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಕೇಂದ್ರದ ಮಾಜಿ ಸಚಿವ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಉಡುಪಿಗೆ ಕರೆತರಲಾಯಿತು. ಪಾರ್ಥಿವ ಶರೀರದ ಜೊತೆಗೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಆಗಮಿಸಿದರು. ಬಳಿಕ ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ಚರ್ಚ್ ಹಾಲ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಫಾದರ್ ಡೆನ್ನಿಸ್, ಫಾದರ್ ಚಾರ್ಲ್ಸ್ ಉಪಸ್ಥಿತಿಯಲ್ಲಿ ಪ್ರಾರ್ಥನೆ ನೆರವೇರಿಸಲಾಗಿದ್ದು, ಮೃತರ ಆತ್ಮದ ಸದ್ಗತಿಗಾಗಿ ಬಲಿಪೂಜೆಯನ್ನು ನೆರವೇರಿಸಲಾಯಿತು.
ಬಳಿಕ ಉಡುಪಿಯ ಬ್ರಹ್ಮಗಿರಿಯ ಬಳಿಕ ಆಸ್ಕರ್ ಅವರ ಮೂಲಮನೆಗೆ ಮೃತದೇಹ ಕೊಂಡೊಯ್ದು ಅಲ್ಲಿಂದ ನೇರವಾಗಿ ಉಡುಪಿಯ ಕಾಂಗ್ರೆಸ್ ಭವನಕ್ಕೆ ತರೆತಂದು ಅಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆಬಾವಕಾಶ ಮಾಡಿಕೊಡಲಾಯಿತು.
ಈ ವೇಳೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯುಟಿ ಖಾದರ್, ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಜೆ ಏರ್ ಲೋಬೊ, ಕೆ. ಗೋಪಾಲ ಪೂಜಾರಿ, ಮೊಯ್ದೀನ್ ಬಾವಾ, ಮಾಜಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ, ಮುಖಂಡರಾದ ಜನಾರ್ದನ್ ತೋನ್ಸೆ, ಅಶೋಕ್ ಕೊಡವೂರು, ಎಂ ಎ ಗಫೂರ್, ಜಿಲ್ಲಾಧಿಕಾರಿ ಕೂರ್ಮರಾವ್, ಎಸ್ಪಿ ವಿಷ್ಣುವರ್ಧನ್ ಸೇರಿದಂತೆ ಮೊದಲಾದವರು ಇದ್ದರು.