ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ:ಲೋಕಾಯುಕ್ತಕ್ಕೆ ದೂರು ನೀಡಲು ಸಿಐಟಿಯು ತೀರ್ಮಾನ
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್ ಗಳ ಕಳಪೆ ಗುಣಮಟ್ಟ ಮತ್ತು ಖರೀದಿಯಲ್ಲಿ ಅವ್ಯವಹಾರ, ರಾಜಕೀಯ ಮಧ್ಯಪ್ರವೇಶ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನಿರ್ಧರಿಸಿದೆ.
ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣ ಸಂಪೂರ್ಣವಾಗಿ ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಲಸೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಹಣ ಮತ್ತು ವಿಪತ್ತು ನಿರ್ವಹಣಾ ನಿಧಿಯಿಂದ ಹಂಚಿಕೆ ಮಾಡಬೇಕೆಂದು ನಿರ್ದೇಶನ ನೀಡಿದೆ. ಆದರೆ ಕಾರ್ಮಿಕ ಸಚಿವರು ಕಲ್ಯಾಣ ಮಂಡಳಿಯ ಹಣದಲ್ಲಿ ಆಹಾರ ಕಿಟ್ ಗಳನ್ನು ಖರೀದಿಸಿರುವುದು ಮತ್ತು ಬೆಂಗಳೂರಿನಲ್ಲಿ ನೋಂದಾಯತ ಕಾರ್ಮಿಕರಿಗೆ ಕಾರ್ಮಿಕ ಸಂಘಗಳ ಮೂಲಕ ನೆಪ ಮಾತ್ರಕ್ಕೆ ಹಂಚಿಕೆ ಮಾಡಿ ರಾಜ್ಯಾದ್ಯಂತ ಮಂಡಳಿಗೆ ಸಂಬಂಧವೇ ಇರದ ಶಾಸಕರಿಗೆ ಹಂಚಿಕೆ ಮಾಡಿರುವುದು 1996 ಕಟ್ಟಡ ಕಾರ್ಮಿಕ ಕಾಯ್ದೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಅಲ್ಲದೆ ಲಕ್ಷಾಂತರ ರೇಷನ್ ಕಿಟ್ ಗಳನ್ನು ಸಗಟು ಮಾರುಕಟ್ಟೆ ದರಗಳಿಗಿಂತ ದುಪ್ಪಟ್ಟು ಬೆಲೆಗೆ ಆರು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಿರುವುದರ ಭ್ರಷ್ಟಚಾರ ಮತ್ತು ಸ್ವಜನಪಕ್ಷಪಾತ ಎದ್ದು ಕಾಣುತ್ತಿದೆ. ಇದರಿಂದ ಕಲ್ಯಾಣ ಮಂಡಳಿಗೆ ಹತ್ತಾರು ಕೋಟಿ ನಷ್ಟ ಆಗಿರುವ ಸಾಧ್ಯತೆ ಇದೆ.
ಕಾರ್ಮಿಕ ಸಂಘಟನೆಗಳು ಮಾಡಿರುವ ಈ ಆರೋಪಗಳಿಗೆ ಕಾರ್ಮಿಕ ಸಚಿವರು ನೀಡಿರುವ ಉತ್ತರವು ಸಮರ್ಪಕವಾಗಿಲ್ಲ. ಕೇವಲ ಆಹಾರ ಕಿಟ್ ಗಳ ಗುಣ ಮಟ್ಟಕ್ಕೆ ಮಾತ್ರಕ್ಕೆ ತನಿಖೆಯನ್ನು ಸೀಮೀತಗೊಳಿಸಿ ಉಳಿದಂತೆ ಖರೀದಿ ವ್ಯವಹಾರ, ಶಾಸಕರಿಗೆ ಕಿಟ್ ವಿತರಣೆ, ಷರತ್ತಿನಂತೆ 10 ಕೆಜಿ ಅಕ್ಕಿ ಬದಲು ಐದು ಕೆಜಿ ನೀಡಿರುವುದು ಸೇರಿ ಇತರೆ ಆರೋಪಗಳಿಗೆ ಉತ್ತರಿಸಿಲ್ಲ. ಅಲ್ಲದೆ ಲಕ್ಷಾಂತರ ಕಾರ್ಮಿಕರಿಗೆ ಇನ್ನೂ ಕೋವಿಡ್ ಪರಿಹಾರದ ಹಣ ಜಮೆಯಾಗಿಲ್ಲ ಹೀಗಿದ್ದೂ ಕಲ್ಯಾಣ ಮಂಡಳಿಯ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಜಾಹೀರಾತುಗಳ ಮೂಲಕ ಕಾರ್ಮಿಕರನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದೆ.
ಈ ಹಿನ್ನಲೆಯಲ್ಲಿ ಇಡೀ ಆಹಾರ ಕಿಟ್ ಗಳ ಖರೀದಿ ವ್ಯವಹಾರವನ್ನೇ ತನಿಖೆಗೊಳಪಡಿಸುವ ಅಗತ್ಯವಿದೆ. ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣದ ಮೇಲೆ ಶಾಸಕರಿಗೆ, ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕಲ್ಯಾಣ ಮಂಡಳಿಯ ಸಭೆಯನ್ನು ಕರೆಯದೇ ಏಕಪಕ್ಷೀಯವಾಗಿ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಕಾನೂನಿನ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಹೀಗಿದ್ದೂ ಕಳೆದ ಎರಡು ವರ್ಷಗಳಿಂದ ಸಚಿವರು ಎಲ್ಲ ತೀರ್ಮಾನಗಳನ್ನು ಏಕಪಕ್ಷೀಯವಾಗಿ ಕೈಗೊಂಡು ನಂತರ ಕೋಟ್ಯಾಂತರ ರೂಪಾಯಿಗಳ ಖರ್ಚಿಗೆ ಘಟನೋತ್ತರ ಅನುಮೋದನೆ ಪಡೆಯುವ ಪರಿಪಾಠ ಬೆಳೆಸಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ.
ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ನಡೆದಿರುವ ಎಲ್ಲ ತೀರ್ಮಾನಗಳ ಕುರಿತಾಗಿ ಲಭ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ಮತ್ತು ಕಾನೂನು ಪ್ರಾಧಿಕಾರಕ್ಕೆ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಕೋರಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಮುಂದಾಗಿದೆ.