ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪಕ್ಷದ ಕಾರ್ಯಕರ್ತರನ್ನು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಭಾರತ್ ಜೋಡೋ ಟ್ರೋಫಿ–2026 ಆಯೋಜಿಸಲಾಗಿದೆ.
ಅಕ್ಟೋಬರ್ 2, 3 ಮತ್ತು 4ರಂದು ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಹಾಗೂ ಮಹಿಳಾ ಥ್ರೋಬಾಲ್ ಪಂದ್ಯಾವಳಿಯ ಅಧಿಕೃತ ಪೋಸ್ಟರ್ ಬಿಡುಗಡೆ ಸಮಾರಂಭ ಕಾಪು ರಾಜೀವ್ ಭವನದಲ್ಲಿ ನಡೆಯಿತು. ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಪಂದ್ಯಾವಳಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ವಿವಿಧ ಗ್ರಾಮೀಣ ಕಾಂಗ್ರೆಸ್ ಸಮಿತಿಗಳಿಂದ 19 ಕ್ರಿಕೆಟ್ ತಂಡಗಳು ಹಾಗೂ 15 ಮಹಿಳಾ ಥ್ರೋಬಾಲ್ ತಂಡಗಳು ಭಾಗವಹಿಸಲಿವೆ. ಪಕ್ಷದ ಕಾರ್ಯಕರ್ತರು, ಯುವಕರು ಹಾಗೂ ಮಹಿಳಾ ಕಾರ್ಯಕರ್ತರ ನಡುವೆ ಸ್ನೇಹ, ಒಗ್ಗಟ್ಟು ಮತ್ತು ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ – ಬೃಹತ್ ಭಾರತ್ ಜೋಡೋ ರ್ಯಾಲಿ
ಅಕ್ಟೋಬರ್ 2ರಂದು ಬೆಳಿಗ್ಗೆ 8 ಗಂಟೆಗೆ ಕಾಪು ರಾಜೀವ್ ಭವನದಿಂದ ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದವರೆಗೆ “ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ – ಬೃಹತ್ ಭಾರತ್ ಜೋಡೋ ರ್ಯಾಲಿ” ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ, ಕ್ರೀಡೆ ಯುವಜನತೆಯ ಶಕ್ತಿ ಮತ್ತು ಪ್ರತಿಭೆಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಕೊಂಡೊಯ್ಯುವ ಅತ್ಯುತ್ತಮ ಮಾಧ್ಯಮವಾಗಿದೆ. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಕಾರ್ಯಕರ್ತರನ್ನು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಸೇರಿಸುವ ಈ ಪ್ರಯತ್ನ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡಲಿದೆ. ಯುವಕರು ಮಾದಕ ವ್ಯಸನ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ಕ್ರೀಡೆ, ಶಿಕ್ಷಣ ಮತ್ತು ಸಮಾಜ ಸೇವೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ಮಾತನಾಡಿ, “ಭಾರತ್ ಜೋಡೋ ಟ್ರೋಫಿ ಕೇವಲ ಕ್ರೀಡಾ ಪಂದ್ಯಾವಳಿಯಲ್ಲ. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಂಘಟನಾ ಚಳವಳಿಯಾಗಿದೆ” ಎಂದರು.
ಕ್ರೀಡೆಯ ಸಂಭ್ರಮದ ಜೊತೆಗೆ ಸಮಾಜದ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವ ಸಾಮಾಜಿಕ ಬದ್ಧತೆಯನ್ನೂ ಕಾರ್ಯಕ್ರಮ ಹೊಂದಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾನವೀಯ ನೆರವು ನೀಡುವ ಕಾರ್ಯಗಳಿಗೆ ಪಂದ್ಯಾವಳಿಯ ಮೂಲಕ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಹಿಳಾ ಥ್ರೋಬಾಲ್ ಪಂದ್ಯಾವಳಿಯ ಮೂಲಕ ಮಹಿಳಾ ಕ್ರೀಡಾ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಮಹಿಳಾ ಕಾರ್ಯಕರ್ತರ ಭಾಗವಹಿಸುವಿಕೆಯನ್ನು ಹೆಚ್ಚಿಸಿ ಸಂಘಟನೆಯಲ್ಲಿ ಅವರ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವೂ ಇದೆ.
ಭಾರತ್ ಜೋಡೋ ಟ್ರೋಫಿ–2026ರ ಪಂದ್ಯಾವಳಿಯ ಪ್ರಮುಖ ಕ್ಷಣಗಳು ಹಾಗೂ ಪಂದ್ಯಗಳ ನೇರ ಪ್ರಸಾರವನ್ನು YouTube Live ಮೂಲಕವೂ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್, ಉಪಾಧ್ಯಕ್ಷ ಸುಧೀರ್ ಕರ್ಕೇರ, ಕೆಪಿಸಿಸಿ ಸಂಯೋಜಕ ಅಬ್ದುಲ್ ಅಜೀಜ್ ಹೆಜಮಾಡಿ ,ಕೇಶವ್ ಸಿ ಸಾಲ್ಯಾನ್ ಪ್ರಧಾನ ಕಾರ್ಯದರ್ಶಿ ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ), ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ,ಹೆಜಮಾಡಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಜ್ವಲ್ ಎಸ್ ಸಾಲ್ಯಾನ್ ಹಾಗೂ ಭಾರತ್ ಜೋಡೋ ಪಂದ್ಯಾವಳಿ ಮತ್ತು ರ್ಯಾಲಿಯ ಮುಖ್ಯ ಸಂಯೋಜಕರಾದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ, ಹೆಜಮಾಡಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ವಿಶಾಲ್ ವಿ. ಬಂಗೇರ, ಹಾಗೂ ಹೆಜಮಾಡಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಾ ಕೆ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಭಾರತ್ ಜೋಡೋ ಟ್ರೋಫಿ–2026ರ ಸಂದೇಶ“ಕ್ರೀಡೆಯ ಮೂಲಕ ಯುವಶಕ್ತಿ • ಒಗ್ಗಟ್ಟಿನ ಮೂಲಕ ಸಂಘಟನಾ ಶಕ್ತಿ • ಸೇವೆಯ ಮೂಲಕ ಸಮಾಜಶಕ್ತಿ.”
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಕಾರ್ಯಕರ್ತರನ್ನು ಕ್ರೀಡೆಯ ಮೂಲಕ ಒಂದಾಗಿಸಿ, ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಹಾಗೂ ಸಮಾಜ ಸೇವೆಯ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಭಾರತ್ ಜೋಡೋ ಟ್ರೋಫಿ–2026 ರೂಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

