ಕಡಬದ ಹಳೆನೂಜಿ ಎಂಬಲ್ಲಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ: ಅಪಾರ ನಷ್ಟ
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಎಂಬಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ಸಂಭವಿಸಿದೆ.
ಹಳೆನೂಜಿ ಬಾಬು ಗೌಡರ ಮಗ ಹೊನ್ನಪ್ಪ ಗೌಡ ಎಂಬವರು ವಾಸ್ತವ್ಯವಿದ್ದ ಮನೆಗೆ ಆಕಸ್ಮಿಕವಾಗಿ ಬೆಂಕಿಬಿದ್ದಿದ್ದು, ಘಟನೆಯಲ್ಲಿ ಕೊಠಡಿಯ ಪೀಠೋಪಕರಣ, ವಸ್ತುಗಳು ಬೆಂಕಿ ತಗುಲಿ ಹಾನಿಗೊಳಗಾಗಿದೆ. ಕೊಠಡಿಯಲ್ಲಿದ್ದ ಮೂರು ಕ್ವೀಂಟಾಲ್ ಗೂ ಅಧಿಕ ರಬ್ಬರ್, ಒಂದು ಸಾವಿರ ತೆಂಗು, ಅಡಿಕೆ, ಕರಿ ಮೆಣಸು, ಪೈಪ್, ಇತರೆ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಲಕ್ಷ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ವಿನಯ ಕುಮಾರಿ ಬಳಕ್ಕ, ಚಂದ್ರಶೇಖರ ಗೌಡ ಹಳೆನೂಜಿ, ಗ್ರಾ.ಪಂ. ಕಾರ್ಯದರ್ಶಿ ಗುರುವ ಎಸ್., ಕಂದಾಯ ಇಲಾಖೆಯ ಹರೀಶ್, ಗ್ರಾ.ಪಂ. ಸಿಬ್ಬಂದಿ ಧನರಾಜ್ ಬೇಟಿ ನೀಡಿದರು. ಕಂದಾಯ ಇಲಾಖಾ ಅಧಿಕಾರಿಗಳು ಹಾನಿ ಬಗ್ಗೆ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಕಂದಾಯ ಹಾಗೂ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.