ಕೊರೋನಾದಿಂದ ಪತ್ರಕರ್ತರಿಗೆ ಸಂಕಷ್ಟ : ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿಕೆ
ಸುರತ್ಕಲ್: “ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶವೇ ತಲ್ಲಣಗೊಂಡಿದ್ದು ಮಾಧ್ಯಮ ಮಿತ್ರರಿಗೆ ಹೆಚ್ಚಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ವತಿಯಿಂದ ಪತ್ರಕರ್ತರ ಕ್ಷೇಮ ವಿಚಾರಿಸುವ ಕಾರ್ಯಕ್ರಮ ಕೈಗೊಂಡಿದ್ದೇವೆ. ಪ್ರತೀ ಹಂತದಲ್ಲೂ ನಿಲ್ಲುವ ಪತ್ರಕರ್ತರನ್ನು ಗುರುತಿಸುವ ಕೆಲಸ ಸಮಾಜ ಮಾಡಬೇಕು” ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಅವರು ಸುರತ್ಕಲ್ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದರು.ಪತ್ರಕರ್ತರು ಸಮಾಜದಲ್ಲಿ ಪಾಸಿಟಿವ್ ಸುದ್ದಿಗಳನ್ನು ಹೆಚ್ಚುಹೆಚ್ಚು ಬಿತ್ತರಿಸುವ ಮೂಲಕ ಸಮಾಜದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಲು ಶ್ರಮಿಸಬೇಕು. ಯಾಕೆಂದರೆ ಪತ್ರಕರ್ತರನ್ನು ಸರಕಾರ ಈ ಬಾರಿ ಕೋವಿಡ್ ಫ್ರಂಟ್ ಲೈನ್ ವರ್ಕರ್ ಆಗಿ ಘೋಷಿಸಿದೆ. ಸರಕಾರದ ಈ ತೀರ್ಮಾನ ಸರಿಯಾಗಿದೆ. ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸುದ್ದಿ ಮಾಡುವ ಮೂಲಕ ಆಗುಹೋಗುಗಳನ್ನು ಬಿತ್ತರಿಸುತ್ತಾರೆ. ಹೀಗಾಗಿ ಆದ್ಯತೆ ಮೇರೆಗೆ ಅವರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಪತ್ರಕರ್ತರು ಎಚ್ಚರಿಕೆಯಿಂದ ಇದ್ದಲ್ಲಿ ಸಮಾಜ ಸ್ವಸ್ಥವಾಗುತ್ತದೆ ಎಂದು ಭರತ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮನಪಾ ಸದಸ್ಯೆ ನಯನಾ ಕೋಟ್ಯಾನ್ ಉಪಸ್ಥಿತರಿದ್ದರು.