ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಶಾಲೆ ಪುನರಾರಂಭಿಸಿ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಮನವಿ
ಬಂಟ್ವಾಳ: ರಾಜ್ಯದ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೋವಿಡ್ ಕಾರಣಕ್ಕಾಗಿ ಸ್ಥಗಿತಗೊಂಡಿರುವ ಶಾಲೆಯನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಸೋಮವಾರ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಪ್ರಕಾಶ್ ಅಂಚನ್ ಕೆಲ ಹೊತ್ತುಗಳ ಕಾಲ ಶಾಲಾರಂಭ, ಆನ್‍ಲೈನ್ ಹಾಗೂ ವಿದ್ಯಾಗಮ ವ್ಯವಸ್ಥೆ ಹಾಗೂ ಪುಸ್ತಕದ ವಿಚಾರವಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಮನವಿಗೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್‍ನ ಸಲಹೆಯನ್ನು ಖಂಡಿತವಾಗಿಯೂ ಸ್ವೀಕರಿಸುತ್ತೇವೆ, ನಾಳೆ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ತಮ್ಮ ಮನವಿ ಹಾಗೂ ಸಲಹೆಯನ್ನು ಪ್ರಸ್ತಾಪಿಸಿ ತಜ್ಞರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ವಿದ್ಯಾರ್ಥಿಗಳ ಪೋಷಕರ ಆಶಯದಂತೆ, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ಕೂಡಲೇ ಈ ಬಗ್ಗೆ ತೀರ್ಮಾನ ಕೈಗೊಂಡು ಸಾಧ್ಯವಾದಷ್ಟು ಆಗಸ್ಟ್ ಮೊದಲ ವಾರದಿಂದಲೇ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಆನ್‍ಲೈನ್ ಹಾಗೂ ವಿದ್ಯಾಗಮ ಶಿಕ್ಷಣ ವವ್ಯಸ್ಥೆಗಳು ಸಾಕಷ್ಟು ಲೋಪದೋಷಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಮುಖಾಮುಖಿ ಶಿಕ್ಷಣವೇ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿಯಾಗಿರುವುದರಿಂದ ರಾಜ್ಯದ್ಯಂತ ತಕ್ಷಣ ಶಾಲೆಗಳನ್ನು ಪುನಾರಂಭಿಸುವಂತೆ ಒತ್ತಾಯಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಕಾರ್ಡ್ ಅಭಿಯಾನವನ್ನು ಆರಂಭಿಸಿದ್ದು ಈ ನಡುವೆ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಸಚಿವರನ್ನು ಮುಖತಃ ಭೇಟಿಯಾಗಿ ಶಾಲೆ ಆರಂಭಿಸುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಈ ಸಂದರ್ಭ ನ್ಯಾಯವಾದಿ ಪ್ರಜ್ವಲ್ ಉಪಸ್ಥಿತರಿದ್ದರು. ಇತ್ತೀಚೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೂ ಮನವಿ ಸಲ್ಲಿಸಲಾಗಿತ್ತು.