ಕೋವಿಡ್ ಪಾಸಿಟಿವಿಟಿ ಕಡಿಮೆ ಮಾಡಲು ಅಗತ್ಯ ಕ್ರಮಕೈಗೊಳ್ಳಿ: ಸಚಿವ ಅಂಗಾರ
ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಪಾಸಿಟಿವಿಟಿಯನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಸಂಪುಟ ದರ್ಜೆಯ ಸಚಿವರಾದ ಎಸ್. ಅಂಗಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಆ.6ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕೋವಿಡ್ ಹಾಗೂ ನೆರೆ ಹಾವಳಿ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೋವಿಡ್ ಹಾಗೂ ಅದರ ಪಾಸಿಟಿವಿಟಿಯನ್ನು ಕಡಿಮೆ ಮಾಡಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ತಪಾಸಣ ಗುರಿಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ನಿಗದಿ ಪಡಿಸಿಕೊಂಡ ಗುರಿಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಳ್ಳಬಾರದು, ಎಲ್ಲಾ ತಾಲೂಕುಗಳಲ್ಲಿಯೂ ವೈದ್ಯರು, ಲ್ಯಾಬ್ ಟೆಕ್ನೀಶಿಯನ್ ಹಾಗೂ ಎಎನ್‍ಎಂಗಳು ಇಲ್ಲ ಎನ್ನಬಾರದು, ಇಲ್ಲದಿದ್ದಲ್ಲಿ ಅವರ ನೇಮಕಾತಿ ಶೀಘ್ರದಲ್ಲಿಯೇ ಆಗಬೇಕು, ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅತ್ಯಗತ್ಯ ತಪಾಸಣಾ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.
ತಪಾಸಣೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮೊದಲು ಗಮನ ಹರಿಸಿ, ಅಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಕೋವಿಡ್ ಸೋಂಕನ್ನು ಪತ್ತೆ ಹಚ್ಚಲು ಎಲ್ಲಾ ತಾಲೂಕುಗಳಲ್ಲಿಯೂ ನಿರಂತರವಾಗಿ ತಪಾಸಣೆ ಕೈಗೊಳ್ಳಬೇಕು, ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಸೆಂಟರ್‍ಗೆ ದಾಖಲಿಸಬೇಕು ಎಂದರು.
ಕೋವಿಡ್ ಹರಡದಂತೆ ಕ್ರಮ ಕೈಗೊಳ್ಳುವುದು, ಸೂಕ್ತ ರಕ್ಷಣೆ ಒದಗಿಸುವುದು ಹಾಗೂ ಹಾಗೂ ಚಿಕಿತ್ಸೆ ನೀಡುವುದು ರಾಜ್ಯ ಸರ್ಕಾರದ ಮೂಲ ಉದ್ದೇಶ ಎಂದ ಸಚಿವರು ಕೋವಿಡ್ ಸೋಂಕಿನ ಅವಧಿಯಲ್ಲಿ ಅಧಿಕಾರಿಗಳು ವಿಳಂಬಕ್ಕೆ ಆಸ್ಪದ ನೀಡಬಾರದು, ಲ್ಯಾಬ್ ಟೆಕ್ನೀಶಿಯನ್‍ಗಳ ವೇತನದಲ್ಲಿ ವಿಳಂಬ ಆಗಬಾರದು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತ ಪಟ್ಟ ಬಿಪಿಎಲ್ ಕುಟುಂಬದವರಿಗೆ 1 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಸುತ್ತೋಲೆ ಬಂದಿದ್ದು, ನಿಯಮಾನುಸಾರ ಪಟ್ಟಿ ತಯಾರಿಸಲು ತಹಶಿಲ್ದಾರರಿಗೆ ಸೂಚಿಸಿದರು.