ಜುಲೈ 26ರಂದು ಕದ್ರಿಯ ವೀರ ಯೋಧರ ಸ್ಮಾರಕದಲ್ಲಿ ಕಾರ್ಗಿಲ್ ವಿಜಯೋತ್ಸವ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಮಂಗಳೂರು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ವತಿಯಿಂದ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ನಗರದ ಕದ್ರಿಯ ಹುತಾತ್ಮ ಯೋಧರ ಸ್ಮಾರಕದಲ್ಲಿ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದಯಾನಂದ ಕಟೀಲ್ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜುಲೈ 26ರಂದು ಬೆಳಗ್ಗೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಗಿಲ್ ಕದನದಲ್ಲಿ ಅಪ್ರತಿಮ ಧೈರ್ಯ, ಸಾಹಸ, ಶೌರ್ಯ ಪ್ರದರ್ಶಿಸಿ ಶತ್ರು ಸೈನಿಕರಿಗೆ ಸಿಂಹಸ್ವಪ್ನವಾಗಿ ಕಾದಾಡಿ ವೀರ ಮರಣವನ್ನಪ್ಪಿದ ಅಮರ ಸೇನಾನಿಗಳ ವೀರಗಾಥೆ, ವಿಜಯಗಾಥೆಗಳನ್ನು ಸ್ಮರಿಸಲಾಗವುದು ಎಂದು ಹೇಳಿದರು. ಆನಂತರ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಜೈನ್ ಅವರು ಯೋಧರಿಗೆ ಶ್ರದ್ಧಾ ನಮನಗಳನ್ನು ಸಲ್ಲಿಸಿ, ಮುಂದಿನ ಪೀಳಿಗೆಗೆ ರಾಷ್ಟ್ರಭಕ್ತಿಯ ಅಮೃತ ಸಿಂಚನ ಮಾಡುವ ಪ್ರೇರಣಾದಾಯಕ ವಿಚಾರ ತಲುಪಿಸಲಾಗುವುದು. ಸಂಸ್ಥೆಯ ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಕಾರ್ಯಕ್ರಮದ ನೇರಪ್ರಸಾರಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ ಸಮಿತಿ ಸಂಚಾಲಕ ಗೋಕುಲ್ದಾಸ್, ಜಿಲ್ಲಾ ಸಹ ಸಂಚಾಲಕ ಲಕ್ಷ್ಮೀ ನಾರಾಯಣ, ಮಹಿಳಾ ಸಂಚಾಲಕಿ ಭಾರತಿ, ದಯಾನಂದ ಕಟೀಲ್ ಉಪಸ್ಥಿತರಿದ್ದರು.