ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಪುತ್ತೂರು: 20 ವರ್ಷಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಾರದಲ್ಲಿ ತಂಡವೊಂದರಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದರು. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆಯವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ಮತ್ತು ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
2020ನೇ ನ.20ರಂದು ಮಧ್ಯಾಹ್ನ ಗಡಿಯಾರದ ಹೊಟೇಲ್‌ವೊಂದರ ಮುಂದೆ ಮಹಮ್ಮದ್ ಯಾನೆ ಮೋನು ಯಾನೆ ಸಿದ್ದಿಕ್, ಅಬ್ದುಲ್ ರಜಾಕ್, ಆದಂ, ಮಜೀದ್, ಮೊಹಮ್ಮದ್, ಹನೀಫ್‌ರವರು ಕೆ.ಹೆಚ್. ಅಬ್ದುಲ್ ಅಜೀಜ್ ಅವರಿಗೆ ವಿಕೇಟ್, ಬ್ಯಾಟ್ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ ತೀವ್ರ ಸ್ವರೂಪದ ಗಾಯ ಮಾಡಿದ್ದರು. ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143, 147, 148, 326, 504, 506 ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪೈಕಿ ಅಜೀಜ್ ಬಿಟ್ಟು ಉಳಿದ 6 ಮಂದಿ ಆರೋಪಿಗಳು ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದರು. ಆರೋಪಿ ಮಜೀದ್ ತಲೆಮರೆಸಿಕೊಂಡಿದ್ದರು. ಆತನ ವಿರುದ್ಧ 149 ಐಪಿಸಿಯಂತೆ ಎಲ್‌ಪಿಸಿ 2012ರಲ್ಲಿ ದಾಖಲಾಗಿತ್ತು. ತಲೆಮೆರೆಸಿಕೊಂಡಿದ್ದ ಆರೋಪಿಯ ಪತ್ತೆ ಕಾರ್ಯವನ್ನು ಪುತ್ತೂರು ನಗರ ಠಾಣಾ ಪೊಲೀಸರು ಸತತ ಪ್ರಯತ್ನ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಆರೋಪಿಯ ಪತ್ತೆ ಕಾರ್ಯದ ಮಾಹಿತಿ ಸಂಗ್ರಹಿಸಿದಾಗ ಆತ ಬೆಂಗಳೂರು, ಕೋಲಾರ ಮತ್ತಿತರ ಕಡೆ ವಾಸ್ತವ್ಯ ಹೊಂದಿರುವುದಾಗಿ ಮಾಹಿತಿ ಪಡೆಯಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಬಂಟ್ವಾಳದ ಗೂಡಿನ ಬಳಿ ವಾಸ್ತವ್ಯ ಇರುವುದಾಗಿ ಮಾಹಿತಿ ದೊರೆತಂತೆ ಜು. 23ರಂದು ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳಾದ ಪರಮೇಶ್ವರ ಮತ್ತು ಸುರೇಶ್ ಅವರು ಆರೋಪಿ ಮಜೀದ್ ಅವರನ್ನು ಬಂಟ್ವಾಳದ ಗೂಡಿನ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.