HomeFresh Newsವೃದ್ಧೆಯ ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ

ವೃದ್ಧೆಯ ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ

ಮಂಗಳೂರಿನಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡಿದ್ದ ಪ್ರಕರಣವನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಅಂತಾರಾಜ್ಯ ಖದೀಮರನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾನೆ.

ಜೂನ್ 14ರ ಮಧ್ಯಾಹ್ನ, ಮಂಗಳೂರಿನ ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದಿದ್ದರು. ಮಾತುಕತೆ ನಡೆಸುವ ಸೋಗಿನಲ್ಲಿ ಏಕಾಏಕಿ ವೃದ್ಧೆಯ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಇದ್ದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದರು. ಕಳುವಾದ ಚಿನ್ನದ ಸರದ ಮೌಲ್ಯ ಸುಮಾರು ₹1,50,000 ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದ ಪೊಲೀಸ್ ತಂಡ, ಜೂನ್ 26ರಂದು ಪಾಂಡೇಶ್ವರದ ರೊಸಾರಿಯೋ ಶಾಲೆ ಬಳಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಗಳ್ಳತನದ ಸತ್ಯ ಬಾಯ್ಬಿಟ್ಟಿದ್ದಾರೆ. ಆದರೆ, ಆರೋಪಿಗಳನ್ನು ಠಾಣೆಗೆ ಕರೆತರುವಾಗ ಬಾಗಲಕೋಟೆ ಮೂಲದ ಆರೋಪಿ ಅಲ್ತಾಫ್ ಹುಸೈನ್ ಎಂಬಾತ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿನಾಯಕ್ ಎಂಬವರ ಮೇಲೆ ಹಲ್ಲೆ ನಡೆಸಿ, ಅವರನ್ನು ತಳ್ಳಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪರಾರಿಯಾದ ಆರೋಪಿಗಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಆರೋಪಿಯ ಮಾಹಿತಿಯನ್ನು ಇತರ ಜಿಲ್ಲೆ ಮತ್ತು ರಾಜ್ಯಗಳಿಗೂ ರವಾನಿಸಲಾಗಿದೆ.

ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಜುಲೈ 6ರವರೆಗೆ (10 ದಿನಗಳ ಕಾಲ) ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments