ತೆಂಕ ಗ್ರಾ.ಪಂ.ನಲ್ಲಿ ಲಿಂಕ್ ರಸ್ತೆ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರಿಂದ ಒತ್ತಾಯ
ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಲಿಂಕ್ ರಸ್ತೆಗಳ ಆರಂಭಿಕ ಐವತ್ತು ಮೀಟರ್ ರಸ್ತೆ ಹೆದ್ದಾರಿ ಇಲಾಖೆ ನಡೆಸಬೇಕಾಗಿದ್ದರೂ ನಿರ್ಲಕ್ಷ್ಯ ಮಾಡಿದ ಇಲಾಖೆಯ ವಿರುದ್ಧ ಆಕ್ರೋಶ ಗೊಂಡ ಗಾ.ಪಂ. ಪ್ರತಿನಿಧಿಗಳು ಸಹಿತ ಸಾರ್ವಜನಿಕರು ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡಿ, ಲಿಂಕ್ ರೋಡ್ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯ ನಿವಾಸಿ ಸುರೇಶ್ ಪೂಜಾರಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುತ್ತಾರೆ ಎಂಬ ನಿಟ್ಟಿನಲ್ಲಿ ನಾವು ಮತ ಹಾಕಿ ಗೆಲ್ಲಿಸಿದ ಈ ಭಾಗದ ಸಂಸದೆ ಶೋಭ ಕರಂದ್ಲಾಜೆ ಇದೀಗ ಕೇಂದ್ರ ಮಂತ್ರಿ, “ಮಗ ರಾಷ್ಟಪತಿಯಾದರೂ ನನಗೆ ರಾಗಿ ಬೀಸೊದು ತಪ್ಪಿಲ್ಲ” ಎಂಬ ಹಿರಿಯರ ಮಾತಿನಂತಾಗಿದೆ ನಮ್ಮ ಸ್ಥಿತಿ. ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಅದೇಷ್ಟೋ ಬಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇದೀಗ ಕುಂಟುತ್ತಾ ಹನ್ನೊಂದು ವರ್ಷಗಳು ಮುಗಿದರೂ ಸಮಸ್ಯೆ ಜೀವಂತವಾಗಿದೆ ಎಂದರು.ಗ್ರಾ.ಪಂ. ಸದಸ್ಯ ಸಂತೋಷ್ ಮಾತನಾಡಿ, ತೆಂಕ ಗ್ರಾ.ಪಂ. ವ್ಯಾಪ್ತಿಯ ಎರಡು ಲಿಂಕ್ ರಸ್ತೆಗಳ ಕಾಮಗಾರಿ ಉಳಿಸಿರುವ ಹೆದ್ದಾರಿ ಇಲಾಖೆ ನಾವು ಈ ಬಗ್ಗೆ ಮಾತನಾಡಿದರೆ ಉಢಾಪೆ ಉತ್ತರ ನೀಡುತ್ತಿದೆ. ಲಿಂಕ್ ರಸ್ತೆ ಕಾಮಗಾರಿ ನಡೆಸುವಂತೆ ಗ್ರಾ.ಪಂ. ಲಿಖಿತ ಅರ್ಜಿ ನೀಡಿದ್ದರೂ ಮತ್ತೆ ಮತ್ತೆ ಅರ್ಜಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಒಂದು ವಾರಗಳ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಗ್ರಾಮಸ್ಥರನ್ನು ಸೇರಿ ಪ್ರತಿಭಟಿಸೊದು ಅನಿವಾರ್ಯ ವಾದೀತು ಎಂಬುದಾಗಿ ಎಚ್ಚರಿಸಿದ್ದಾರೆ. ಸ್ಥಳಕ್ಜೆ ಆಗಮಿಸಿದ ಪಡುಬಿದ್ರಿ ಪೊಲೀಸರು ಹದ್ದು ಮೀರಲಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.