ದಿಢೀರ್ ದಾಳಿ ನಡೆಸಿ ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಎಸಿಬಿ ಅಧಿಕಾರಿಗಳು..!
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ 9 ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಆಧರಿಸಿ ಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಶೋಧ ಕಾರ್ಯದಲ್ಲಿ ಚಿನ್ನ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ದಿಢೀರನೇ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಇಂದು ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಜಿಲ್ಲಾ ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ. ಶ್ರೀಧರ್ ಅವರ ಮನೆ ಹಾಗೂ ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಜಿ.ಶ್ರೀಧರ್ ಅವರಿಗೆ ಸೇರಿದ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕಕ್ಕೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳು ಶ್ರೀಧರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು.
ರಾಜ್ಯದ ಒಂಬತ್ತು ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಮಂಗಳೂರಲ್ಲೂ ಎಸಿಬಿ ದಾಳಿ ನಡೆದಿದೆ.
ಮಂಗಳೂರು, ಉಡುಪಿ, ಮಂಡ್ಯ, ಬೆಂಗಳೂರು ಸೇರಿದಂತೆ 30ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ಮಂಗಳೂರಿನ ನಗರ ಅಭಿವೃದ್ಧಿ ಘಟಕದ ಇಂಜಿನಿಯರ್ ಜಿ. ಶ್ರೀಧರ್, ಉಡುಪಿಯ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಇಂಜಿನಿಯರ್ ಕೃಷ್ಣ, ಕೆಆರ್ ಡಿಎಲ್ ಅಧಿಕಾರಿ ಆರ್. ಪಿ ಕುಲಕರ್ಣಿ, ಕೋಲಾರದ ಮಾಲೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಾಯಕ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ, ಮಂಡ್ಯದ ಅರಣ್ಯ ಅಧಿಕಾರಿ ವೆಂಕಟೇಶ್, ವಿಜಯಪುರ ಹೆಸ್ಕಾಂ ಇಂಜಿನಿಯರ್ ಸಿದ್ಧರಾಮ ಮಲ್ಲಿಕಾರ್ಜುನ್, ಕೋರಮಂಗಲ ಆರ್ಟಿಓ ಅಧಿಕಾರಿ ಕೃಷ್ಣಮೂರ್ತಿ, ಬಳ್ಳಾರಿ ಎಲೆಕ್ರಿಕಲ್ ಇಂಜಿನಿಯರ್ ವಿಜಯ್ ಕುಮಾರ್ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನಲೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮಿಟ್ಟಿಸಿದಂತಾಗಿದೆ.