ಜೀವವನ್ನು ಪಣಕ್ಕಿಟ್ಟು ಪರೀಕ್ಷೆ ಬರೆದ ಎಸ್ಸೆಸ್ಸೆಲ್ಸಿ ಮಕ್ಕಳು
ಜಿಟಿ ಜಿಟಿ ಮಳೆ. ತುಂಬಿ ಹರಿಯುತ್ತಿರುವ ಸೌಪರ್ಣಿಕೆ. ಆ ಭಾಗದ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕೆಂದರೆ ತುಂಬಿ ಹರಿಯುವ ನದಿಯನ್ನು ದೋಣಿ ಮೂಲಕ ದಾಟಿ ಜೀವವನ್ನು ಪಣಕ್ಕಿಟ್ಟು ಪರೀಕ್ಷೆಯನ್ನು ಬರೆಯಬೇಕು. ಆದರೆ ಮಕ್ಕಳ ಸುರಕ್ಷತೆಗಾಗಿ ಖುದ್ದು ಡಿಡಿಪಿಐ ಉಡುಪಿಯಿಂದ ಬಂದು ಪರೀಕ್ಷಾ ಕೇಂದ್ರಕ್ಕೆ ದೋಣಿಯ ಮೂಲಕ ಮಕ್ಕಳನ್ನು ಕರೆದೊಯ್ದ ಅಪರೂಪದ ಸ್ಟೋರಿಯನ್ನು ನಾವಿವತ್ತು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ..
ಒಂದೆಡೆ ಜಿಟಿಜಿಟಿ ಮಳೆಯಲಿ ನೆನೆದು ಬಯಲು ದಾರಿಯಲ್ಲಿ ಸಾಲಾಗಿ ನಡೆದುಕೊಂಡು ಬರುತ್ತಿರುವ ಅಧಿಕಾರಿಗಳು. ಇನ್ನೊಂದೆಡೆಯಲ್ಲಿ ತುಂಬಿ ಹರಿಯುತ್ತಿರುವ ಸೌಪರ್ಣಿಕಾ ನದಿ. ದೋಣಿಯ ಮೇಲೆ ಆರೇಳು ಮಂದಿ ಅಧಿಕಾರಿಗಳು ಹಾಗೂ ಶಿಕ್ಷಕರು. ಇಬ್ಬರು ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿನಿಯರು. ಆಗಾಗೆ ಬೀಸುವ ಸುಳಿಗಾಳಿಯ ಒತ್ತಡದಿಂದಾಗಿ ಆಚಿಂದೀಚೆಗೆ ಅಲುಗಾಡುತ್ತಿರುವ ದೋಣಿ. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಬದಿಗೊತ್ತಿ ಸ್ವತಃ ನಾವಿಕರಾದ ಮನೆಯವರು. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ. ಈ ನದಿಯ ಮೇಲೆ ದೋಣಿಯ ಮೂಲಕ ಹಾಗೊಂದು ಹೀಗೊಂದು ಹುಟ್ಟುಹಾಕಿ ಬರುತ್ತಿರುವ ಈ ಭಯಾನಕ ಚಿತ್ರಣ ನೋಡಿದರೆ ಎಂತವರ ಎದೆಯೂ ಒಮ್ಮೆ ಝಲ್ ಅನ್ನಿಸದಿರದು. ಇದು ಮರವಂತೆಯ ಕುರು ದ್ವೀಪದ ವಿದ್ಯಾರ್ಥಿಗಳ ನಿತ್ಯದ ಬದುಕಿನ ಚಿತ್ರಣ. ಆದರೆ ಎಸ್ಎಸ್ಎಲ್ಸಿ ಪರೀಕ್ಷಾ ನೆಪದಲ್ಲಿ ಇವರ ಸಂಕಷ್ಟ ಇನ್ನಷ್ಟು ಮುನ್ನೆಲೆಗೆಗೆ ಬಂದಿದೆ. ಕೊರೋನಾ ಆತಂಕದ ನಡುವೆ ಮಕ್ಕಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬೇಕೋ ಬೇಡವೋ ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಸರ್ಕಾರ ಮಾತ್ರ ಧೈರ್ಯ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲು ಮುಂದಾಗಿ ಬಹುತೇಕ ಯಶಸ್ಸು ಕಂಡಿದೆ.ತಜ್ಙರ ಸಲಹೆಯಂತೆ ಮೂರು ವಿಷಯಗಳ ಒಂದು ಪರೀಕ್ಷೆ ಈಗಾಗಲೇ ಮುಗಿದಿದ್ದು, ಇನ್ನುಳಿದ ಮೂರು ವಿಷಯಗಳಿಗೆ ಇಂದು ಕೊನೆಯ ಪರೀಕ್ಷೆ ನಡೆದಿದೆ. ಕೊರೋನಾತಂಕದ ನಡುವೆಯೂ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ದೃಷ್ಠಿಯಿಂದ ಎಲ್ಲಾ ವಿದ್ಯಾರ್ಥಗಳು ಪರೀಕ್ಷೆಯನ್ನು ಎದುರಿಸಬೇಕೆಂಬ ಹಂಬಲದಿಂದ ಉಚಿತ ಬಸ್ ವ್ಯವಸ್ಥೆ ಮುಂತಾದ ವಿಶೇಷ ಪ್ರಯತ್ನಗಳನ್ನು ಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆ ಮಾಡಿ ಪರೀಕ್ಷೆ ಏನೂ ತೊಂದರೆಗಳಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿದೆ. ಬಸ್ ವ್ಯವಸ್ಥೆ ಇಲ್ಲದ ಭಾಗಗಳಿಗೆ ವಿಶೇಷ ವಾಹನ ವ್ಯವಸ್ಥೆಗಳನ್ನು ಮಾಡಿ ಶಿಕ್ಷಕರ ಮುತುವರ್ಜಿಯಲ್ಲೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರುವ ಅವಕಾಶವೂ ಕಲ್ಪಿಸಲಾಗಿದೆ. ಆದರೆ ಇದೆಲ್ಲದರ ಮಧ್ಯೆ ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವುದು ಮಾತ್ರ ಮರವಂತೆ ಸನಿಹದ ಕುರು ದ್ವೀಪದ ವಿದ್ಯಾರ್ಥಿನಿಯರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ವಲಯದ ಮರವಂತೆ ಸರಕಾರಿ ಪ್ರೌಢ ಶಾಲೆಯ ಶಿಲ್ಪಾ ಹಾಗೂ ಸಂಜನಾ ಅವರ ಮನೆ `ಕುರು’ ದ್ವೀಪದಲ್ಲಿದೆ. ಇಲ್ಲಿಂದ ಊರಿಂದಾಚೆಗೆ ಬರಬೇಕೆಂದರೆ ಒಂದೇ ಮರವಂತೆ, ಇಲ್ಲವಾದರೆ ನಾಡಾ ಮೂಲಕ ಸಾಗಿ ಬರಬೇಕಾಗುತ್ತದೆ. ದೋಣಿಯ ಮೂಲಕ ಬಂದರೂ ನೇರ ರಸ್ತೆ ಸಿಗುತ್ತದೆ ಎಂಬ ಊಹೆ ನಿಮಗಿದ್ದರೆ ಅದು ಸ್ಪಷ್ಟ ಸುಳ್ಳು. ದೋಣಿ ಮೂಲಕ ಸಾಗಿ ಬಂದರೂ ಇಲ್ಲಿನ ವಿದ್ಯಾರ್ಥಿಗಳು ಬಯಲು ದಾರಿಯಲ್ಲಿ ಮತ್ತೆ ಅರ್ಧ ಕಿ.ಮೀ ಗೂ ಅಧಿಕ ದಾರಿ ನಡೆದುಕೊಂಡೆ ಕ್ರಮಿಸಿಬೇಕು. ನಿರಂತರ ಸುರಿದ ಭಾರೀ ಮಳೆಯಿಂದಾಗಿ ಪರೀಕ್ಷೆ ಬರೆಯಲು ಬರಲು ಈ ವಿದ್ಯಾರ್ಥಿನಿಯರಿಗೆ ತುಂಬಾ ಸಮಸ್ಯೆಯಾಗಿತ್ತು. ಈ ಬಗ್ಗೆ ಪರೀಕ್ಷೆಯ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಅವರ ಗಮನಕ್ಕೆ ಬಂದಿದ್ದು, ಶಿಕ್ಷಣ ಇಲಾಖೆ ಮಕ್ಕಳನ್ನು ಕರೆತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಇದಕ್ಕಾಗಿಯೇ ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಮಕ್ಕಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ಒಂದು ವಿಶೇಷವೇನೆಂದರೆ ಖುದ್ದು ಡಿಡಿಪಿಐ ಎಚ್.ಎನ್ ನಾಗೂರ ಹಾಗೂ ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ವತಃ ದೋಣಿ ಮೇಲೇರಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಡಿಡಿಪಿಐ ಹಾಗೂ ಬೈಂದೂರು ತಹಸೀಲ್ದಾರ್ ಮರವಂತೆ ರಾ.ಹೆದ್ದಾರಿಯಿಂದ ಅರ್ಧ ಕಿ.ಮೀ ಬಯಲು ದಾರಿಯಲ್ಲಿ ನಡೆದು ಆ ಬಳಿಕ ದೋಣಿ ಮೂಲಕ ಕುರುವಿಗೆ ಪ್ರಯಾಣ ಬೆಳೆಸಿ ಮತ್ತೆ ಅದೇ ದೋಣಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಬಿಟ್ಟು ಗಮನ ಸೆಳೆದಿದ್ದಾರೆ. ಮಕ್ಕಳ ಬಗೆಗಿನ ಶಿಕ್ಷಣ ಇಲಾಖೆಯ ಈ ಕಾಳಜಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕುರು ದ್ವೀಪ ನಿವಾಸಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಸುತ್ತಲೂ ನೀರು ಆವರಿಸಿಕೊಂಡಿರುವ ಈ ಊರಿಗೆ ಶಾಶ್ವತ ಸೇತುವೆ ಬೇಕೆನ್ನುವ ಕೂಗಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಸುಮಾರು ನಲವತ್ತು ಎಕರೆ ವಿಸ್ತೀರ್ಣವಿರುವ ಕುರು ದ್ವೀಪದಲ್ಲಿ ಬ್ರಾಹ್ಮಣ, ಬಿಲ್ಲವ, ಪರಿಶಿಷ್ಟ ಜಾತಿ, ಕ್ರೈಸ್ತ ಸಮುದಾಯ ಸೇರಿದಂತೆ ಒಟ್ಟು ಒಂಭತ್ತು ಕುಟುಂಬಗಳಿವೆ. ಶಾಲಾ ಕಾಲೇಜು ಸೇರಿದಂತೆ ಸರಿಸುಮಾರು ಹದಿನೈದು ಮಕ್ಕಳು ನಿತ್ಯವೂ ದೋಣಿ ಮೂಲಕ ಮರವಂತೆ ಹಾಗೂ ನಾಡಾ ಕಡೆಗೆ ಸಾಗಿ ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ಸ್ಥಿತಿ ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ಭಾಗದ ಜನರಿಗೆ ಹಾಗೂ ವಿದ್ಶಾರ್ಥಿಗಳಿಗೆ ಅಗತ್ಯವಾಗಿ ಬೇಕಿರುವ ಸೇತುವೆಯನ್ನು ಕಲ್ಪಿಸುತ್ತಾರೆಯೇ ಕಾದು ನೋಡಬೇಕಿದೆ.