ದ.ಕ. ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಡಿಡಿಪಿಐ ಮಲ್ಲೇಸ್ವಾಮಿ
ಎಸೆಸೆಲ್ಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಈಗಾಗಲೇ 9 ಮಂದಿ ಕೊರೋನ ಸೋಂಕಿತ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಅವರಿಗೆ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸಕಲ ವ್ಯವಸ್ಥೆಯೊಂದಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಡಿಡಿಪಿಐ ಮಲ್ಲೇಸ್ವಾಮಿ ಈ ಮಾಹಿತಿ ನೀಡಿದರು.
ದ.ಕ. ಜಿಲ್ಲೆಯಲ್ಲಿ ಈ ಬಾರಿ 179 ಪರೀಕ್ಷಾ ಕೇಂದ್ರಗಳಲ್ಲಿ 29351 ರೆಗ್ಯುಲರ್, 694 ಖಾಸಗಿ, 2050 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 538ಖಾಸಗಿ ಪುನರಾವರ್ತಿತ ಸೇರಿದಂತೆ ಒಟ್ಟು 32636 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮಕ್ಕಳು ಒಂದು ವೇಳೆ ಕೊರೋನ ಸೋಂಕಿಗೆ ಒಳಪಟ್ಟಿದ್ದಲ್ಲಿ ಪೋಷಕರು ಶನಿವಾರದೊಳಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಅದರಂತೆ 9 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಕಾರದಲ್ಲಿ ಪರೀಕ್ಷೆ ಎದುರಿಸಲು ಕ್ರಮಗಳ್ನು ಕೈಗೊಳ್ಳಲಾಗಿದೆ. ಕೇರಳದ 441 ಮಂದಿ ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ 121 ಮಕ್ಕಳು ತಲಪಾಡಿ ಮೂಲಕ ಆಗಮಿಸಲಿದ್ದು, ಅವರಿಗೆ ಕೆಎಸ್ಆರ್ಟಿಸಿ, ಖಾಸಗಿ ಬಸ್ಸುಗಳಲ್ಲಿ ಮಕ್ಕಳ ಪರೀಕ್ಷೆ ಪ್ರವೇಶ ಪತ್ರದ ಆಧಾರದಲ್ಲಿ ಉಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿ ಸಲು ಮನವಿ ಮಾಡಲಾಗಿದೆ. ಇದಲ್ಲದೆ ಶಿಕ್ಷಣ ಇಲಾಖೆಯು 4ಬಸ್ಸುಗಳನ್ನು ತಲಪಾಡಿ ಗಡಿಯಲ್ಲಿ ಇರಿಸಲು ಸೂಚಿಸಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ವಾಸವಿ ರುವ ಪ್ರತಿ 4 ಕಿ.ಮೀ. ವ್ಯಾಪ್ತಿಯಲ್ಲೇ ಪರೀಕ್ಷಾ ಕೇಂದ್ರಗಳಿವೆ. ಈಗಾಗಲೇ ಸುಮಾರು 5೦ರಷ್ಟು ವಿದ್ಯಾರ್ಥಿಗಳು ಬಸ್ಸು ವ್ಯವಸ್ಥೆಗಾಗಿ ಬೇಡಿಕೆ ಸಲ್ಲಿಸಿದ್ದು, ಅವರಿಗೆ ಸೂಕ್ತ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದು ಮಲ್ಲೇ ಸ್ವಾಮಿ ತಿಳಿಸಿದರು.
ಈ ಬಾರಿ ಮಕ್ಕಳ ಜತೆಗೆ ಶಿಕ್ಷಕರಿಗೆ ಎಸೆಸೆಲ್ಸಿ ಪರೀಕ್ಷೆ ಹೊಸತಾಗಿದ್ದು, ಒಎಂಆರ್ ಶೀಟ್ ಆಧಾರದಲ್ಲಿ ಪರೀಕ್ಷೆ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಮಾದರಿ ಪರೀಕ್ಷೆಯನ್ನು ಕೂಡಾ ನಡೆಸಲಾಗಿದ್ದು, ಮಾದರಿ ಪ್ರಶ್ನೆ ಪತ್ರಿಕೆಗಳೂ ವಿದ್ಯಾಥಿಗರ್ಳಿಗೆ ತಲುಪುವಂತೆ ಮಾಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲ, ಆತಂಕವಿಲ್ಲದೆ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಶಾಸಕರಾದ ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.