ಪಡುಬಿದ್ರಿಯಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ: ವ್ಯಕ್ತಿ ಮೃತ್ಯು
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಡೌನ್‌ಟೌನ್ ಬಾರ್ ಮುಂಭಾಗ ಅನದಿಕೃತವಾಗಿ ತೆರೆದುಕೊಂಡಿರುವ ಡೈವರ್ಶನ್ ಇದೀಗ ಎರಡನೇ ಬಲಿ ಪಡೆದುಕೊಂಡಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಬಾಲಕೃಷ್ಣ ಭಟ್(74). ಇವರು ತನ್ನ ಮನೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಹೆಜಮಾಡಿಗೆ ಪ್ರಯಾಣಿಸುವುದಕ್ಕಾಗಿ ಅನದಿಕೃತ ಡೈವರ್ಶನ್‌ನಲ್ಲಿ ರಸ್ತೆ ದಾಟುತ್ತಿದಂತೆ, ಕಡಲಿಗೆ ತಡೆಗೋಡೆ ನಿರ್ಮಾಣ ಗುತ್ತಿಗೆದಾರ ಸಕಲೇಶಪುರ ಮೂಲದ ಇದೀಗ ಬೆಂಗಳೂರಿನಲ್ಲಿ ವಾಸವಿರುವ ಧನ್ವಿನ್ ಎಂಬಾತ ಉಡುಪಿ ಕಡೆಯಿಂದ ಚಲಾಯಿಸಿಕೊಂಡು ಬಂದಿರುವ ಶಿಪ್ಟ್ ಕಾರು ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿಯಾಗಿದ್ದು, ರಸ್ತೆಗೆ ಎಸೆಯಲ್ಪಟ್ಟ ಭಟ್ ಗಂಭೀರ ಗಾಯಗೊಂಡು ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಅನದಿಕೃತ ಡೈವರ್ಶನ್ ಮುಚ್ಚಲು ಹೆಚ್ಚಿದ ಒತ್ತಡ: ಬಹಳಷ್ಟು ಅಪಘಾತಗಳಿಗೆ ಕಾರಣವಾಗಿರುವ ಹಾಗೂ ಇಬ್ಬರು ಅಮಾಯಕರನ್ನು ಬಲಿ ಪಡೆದುಕೊಂಡಿರುವ ಈ ಅನದಿಕೃತ ಡೈವರ್ಶನ್ ಮುಚ್ಚುವಂತ್ತೆ ಸಾರ್ವಜನಿಕ ವಲಯದಲ್ಲಿ ಬಾರೀ ಒತ್ತಡ ಬರುತ್ತಿರುವ ಹಿನ್ನಲೆಯಲ್ಲಿ, ಗ್ರಾ.ಪಂ. ಸಹಿತ ಪೊಲೀಸ್ ಇಲಾಖೆ ಹೆದ್ದಾರಿ ಇಲಾಖೆಯತ್ತ ಮುಖ ಮಾಡಿದ್ದಾರೆ. ಈ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಗೊಂಡಿದ್ದರೂ ಜನರ ಪ್ರಾಣಕ್ಕೆ ಕುತ್ತು ತರುವ ಈ ಹೆದ್ದಾರಿ ಡೈವರ್ಶನ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಗಳಲ್ಲೇ ಉತ್ತರವಿಲ್ಲ. ಆ ದಿನದಲ್ಲಿ ಡೈವರ್ಶನ್ ಬೇಕು ಎಂಬುದಾಗಿ ಪ್ರತಿಭಟಿಸಿದ ಮಂದಿ ಇಲ್ಲಿ ನಡೆಯುತ್ತಿರುವ ದುರಂತಗಳ ಹೊಣೆ ಹೊತ್ತು ಕೊಳ್ಳುತ್ತಾರೆಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಾರೀ ಬಿರುಗಾಳಿಯನ್ನೇ ಎಬ್ಬಿಸಿದೆ.