ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲ್ ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಸೊರ್ನಾಡು ಎಂಬಲ್ಲಿ ಸಾರ್ವಜನಿಕ ಸ್ವಾಮ್ಯಕ್ಕೊಳಪಟ್ಟ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳವು ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸ್ಥಳೀಯ ಅರ್ಬಿ ನಿವಾಸಿ ಐವನ್ ಚಾರ್ಲ್ ಪಿಂಟೋ(43) ಹಾಗೂ ಆತನಿಗೆ ಸಹಕರಿಸಿದ ಆರೋಪದಡಿ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿಸೋಜ ಎಂಬವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್‌ಗಳು ಮತ್ತು ಡಿಸೇಲನ್ನು ವಶ ಪಡಿಸಿಕೊಂಡಿದ್ದಾರೆ.
ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಮಂಗಳೂರು- ಬೆಂಗಳೂರು ಸರಬರಾಜಾಗುವ ಪೆಟ್ರೋಲಿಯಂ ಪೈಪ್‌ಲೈನ್ ಸೊರ್ನಾಡು ಬಳಿ ಆರೋಪಿ ಐವನ್‌ಗ ಸೇರಿದ ಜಮೀನಿನಲ್ಲಿ ಹಾದು ಹೋಗಿದ್ದು ಆತ ಪಿಎಂಎಚ್‌ಬಿಎಲ್ ಪೈಪ್‌ಲೈನ್‌ಗೆ ಕನ್ನ ಕೊರೆದು 1.5 ಇಂಚಿನ ಪೈಪ್ ಮತ್ತು ಗೇಟ್‌ವಾಲ್ ಅಳವಡಿಸಿರುವ ಎಂ.ಎಸ್. ಪ್ಲೇಟನ್ನು ವೆಲ್ಡ್ ಮಾಡಿ, 55 ಮೀ ಉದ್ದದ ಪ್ಲೆಕ್ಸಿಬಲ್ ಪೈಪನ್ನು ಅಳವಡಿಸಿ 1. 5ಇಂಚು ವ್ಯಾಸ ಹೊಂದಿರುವ ೩ ವಾಲ್‌ಗಳನ್ನು ಜೋಡಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳವು ಮಾಡುತ್ತಿದ್ದ. ಕಳೆದ ಜು.11ರಂದು ಸಂಜೆ 5 ಗಂಟೆಯಿಂದ ಪೆಟ್ರೋಲಿಯಂ ಹರಿವಿನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಪೈಪ್‌ಲೈನ್‌ನಲ್ಲಿ ಕೋಟಿಂಗ್ ಡ್ಯಾಮೇಜ್ ಆಗಿರಬಹುದೆಂದು ಕಂಪೆನಿಯವರು ಸರ್ವೇ ಮೂಲಕ ಪರಿಸೀಲಿಸಿದಾಗ ಸಿಎಚ್ 23.5ಕೆಎಂ ಎಂಬಲ್ಲಿ ಹರಿವು ಸೋರಕೆಯಾಗಿರುವುದು ಕಂಡು ಬಂದು ಭೂಮಿಯನ್ನು ಅಗೆದು ನೋಡಿದಾಗ ಪೈಪ್‌ಲೈನ್‌ನಿಂದ ಕಳವು ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಎಂಎಚ್‌ಬಿ ಲಿಮಿಟೆಡ್‌ನ ಸ್ಟೇಷನ್ ಇನ್‌ಚಾರ್ಜ್ ಅಧಿಕಾರಿ ರಾಜನ್ ಜಿ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಜು. 30ರಂದು ದೂರು ನೀಡಿದ್ದರು. ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನಿಗೆ ಈ ಕೃತದಲ್ಲಿ ಪೈಪ್‌ಲೈನ್ ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿ ಪೈಪ್‌ಲೈನ್ ಅಳವಡಿಸಿಕೊಟ್ಟ ಆರೋಪದಡಿ ಅಜಿತ್ ಹಾಗೂ ಪ್ರೀತ ಡಿಸೋಜ ಅವರನ್ನು ದಸ್ತಗಿರಿ ಮಾಡಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇಟ್ಟು 40 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಕಳವಾಗಿರುವುದಾಗಿ ತಿಳಿದು ಬಂದಿದೆ.
ಜಿಲ್ಲಾ ಪೊಲಿಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಅವರ ನಿರ್ದೇಶದಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಕಾರ್ಯಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಹೆಚ್.ಸಿಗಳಾದ ಜನಾರ್ಧನ, ಗೋಣಿ ಬಸಪ್ಪ, ಸುರೇಶ್, ಪಿ.ಸಿಗಳಾದ ಮನೋಜ್, ಪುನೀತ್ ಪಾಲ್ಗೊಂಡಿದ್ದರು.