ಬಸ್ ಮಾಲಕರ ಲಾಬಿಗೆ ಶರಣಾದ ಜಿಲ್ಲಾಡಳಿತ : ಸುನಿಲ್ ಕುಮಾರ್ ಬಜಾಲ್
ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀ ಬಸ್ ಪ್ರಯಾಣ ದರಯೇರಿಕೆಯ ವಿರುದ್ಧ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ CPIM ನೇತ್ರತ್ವದಲ್ಲಿ ಯೆಯ್ಯಾಡಿ ಜಂಕ್ಷನ್ ನಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು, ಈ ಮಾತುಗಳನ್ನು ಹೇಳಿದರು.ಮುಂದುವರಿಸುತ್ತಾ ಅವರು, ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ನ್ಯಾಯಯುತವಾಗಿ ಪ್ರಯಾಣ ದರವನ್ನು ಪರಿಷ್ಕರಿಸಬೇಕಾಗಿದ್ದ ಜಿಲ್ಲಾಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡು ಜಿಲ್ಲೆಯ ಜನತೆಗೆ ಮಹಾಮೋಸಗೈದಿದ್ದಾರೆ ಎಂದು ಹೇಳಿದರು.
CITU ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿಯವರು ಮಾತನಾಡುತ್ತಾ, ಬಸ್ ಪ್ರಯಾಣ ದರಯೇರಿಕೆಯಿಂದ ಕಂಗೆಟ್ಟ ಜಿಲ್ಲೆಯ ಜನತೆಯ ನೋವಿಗೆ ಸ್ಪಂದಿಸಬೇಕಾಗಿದ್ದ ಸಂಸದರು ಶಾಸಕರು ಯಾವ ಗುಹೆಯಲ್ಲಿ ಅಡಗಿಕೊಂಡಿದ್ದಾರೆ. ಧರ್ಮ ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಜನತೆಯ ಸಂಕಷ್ಟ ಹಾಗೂ ಜಿಲ್ಲೆಯ ಅಭಿವೃದ್ಧಿ ಬೇಕಾಗಿಲ್ಲ. ಅಂತಹವರನ್ನು ಆಯ್ಕೆ ಮಾಡುವ ಮೂಲಕ ಜನರ ಬದುಕು ನರಕಯಾತನೆಯಾಗಿದೆ ಎಂದು ಹೇಳಿದರು.DYFI ಮಂಗಳೂರು ನಗರಾಧ್ಯಕ್ಷರಾದ ನವೀನ್ ಕೊಂಚಾಡಿಯವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ, ಬಸ್ ಪ್ರಯಾಣ ದರಯೇರಿಕೆಯ ವಿರುದ್ದ ಜಿಲ್ಲೆಯಲ್ಲಿ ನಡೆದ ಐತಿಹಾಸಿಕ ಯಶಸ್ವಿ ಹೋರಾಟವನ್ನು ಮೆಲುಕು ಹಾಕುತ್ತಾ,ಏರಿಸಿದ ದರವನ್ನು ಕೂಡಲೇ ತಡೆಹಿಡಿದು,ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ,ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ,ಸ್ಥಳೀಯ CPIM ಮುಖಂಡರಾದ ದಯಾನಂದ ಕೊಪ್ಪಳಕಾಡು, ದಯಾನಂದ ಶೆಟ್ಟಿಗಾರ್, ಪದ್ಮನಾಭ ಕೊಂಚಾಡಿ, ನಾರಾಯಣ,ಪ್ರವೀಣ್, ಪಾಂಡುರಂಗ ಮುಂತಾದವರು ಭಾಗವಹಿಸಿದ್ದರು.