ಮಂಗಳೂರು ವಿಶ್ವವಿದ್ಯಾಲಯದ ಬಾಕಿ ಉಳಿದ ಪರೀಕ್ಷೆಗಳನ್ನು ಮುಂದುವರಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಿಂದ ಮುಂದುವರಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚಿಸಿದರು.

ಅವರು ಆ.5ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ 2021ರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮುಂದುವರಿಕೆ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ತೀವ್ರಗೊಂಡ ಕಾರಣ ಕಾಸರಗೋಡಿಗೆ ಸರಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ, ಗಡಿಗಳ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅನಗತ್ಯ ಸಂಚಾರವನ್ನು ರದ್ದು ಪಡಿಸಲಾಗಿದೆ, ಆದ ಕಾರಣ ಕೇರಳ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಕಷ್ಟ ಸಾಧ್ಯವಾದ ಕಾರಣ, ಆಗಸ್ಟ್ 4 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದ್ದಲ್ಲೀ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಪದವಿ ಪರೀಕ್ಷೆಗಳಲ್ಲಿ ವಹಿಸಲಾದ ಅಸೈನ್‍ಮೆಂಟ್‍ಗಳನ್ನು ಆನ್‍ಲೈನ್ ಅಥವಾ ಅಂಚೆ ಮೂಲಕ ಸಂಬಂಧಿಸಿದ ಕಾಲೇಜುಗಳೀಗೆ ತಲುಪಿಸಲು ಅವಕಾಶ ನೀಡಬೇಕು, ಪದವಿ ಪರೀಕ್ಷೆಗಳಿಗೆ ಹಾಜರಾಗಲು ಇಚ್ಛಿಸುವ ಕೋವಿಡ್ ಸೋಂಕಿತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ 29,052 ಪದವಿ ವಿದ್ಯಾರ್ಥಿಗಳು, 5,493 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಕೇರಳದ 2000 ವಿದ್ಯಾರ್ಥಿಗಳು (ಪದವಿ ಪರೀಕ್ಷೆ) ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ, ಈ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರ ವಹಿಸಬೇಕು, ಯಾವುದೇ ರೀತಿಯ ದಂಡವನ್ನು ವಿಧಿಸದಂತೆ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ಅವರು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪ) ಡಾ.ಪಿ.ಎಲ್. ಧರ್ಮ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ.ಜಯಕರ ಭಂಡಾರಿ. ಎಂ, ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಕಾರ್ಯದರ್ಶಿ (ಎನ್.ಐ.ಸಿ) ಫಾರೂಕ್ ಬಾಯಬೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ದೇವಿಪ್ರಸಾದ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Related Posts

Leave a Reply

Your email address will not be published.