ರಾಜ್ಯದ ಆರೋಗ್ಯ ಮೂಲಸೌಕರ್ಯ ಅಭಿವೃದ್ದಿಗೆ ಕೇಂದ್ರದಿಂದ ನೆರವು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಶ್ರೀ ಮನ್ ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯಕ್ಕೆ 1.5 ಕೋಟಿ ಲಸಿಕೆ ಪೂರೈಸಲು ಕೋರಿಕೆ ಸಲ್ಲಿಸಿದ್ದು, 1 ಕೋಟಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ಇದರಿಂದ ರಾಜ್ಯದಲ್ಲಿ ಪ್ರತಿದಿನ 2 ರಿಂದ 3 ಲಕ್ಷ ಲಸಿಕೆ ಒದಗಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕೋವಿಡ್ 3 ನೇ ಅಲೆ ನಿಯಂತ್ರಣ, ಲಸಿಕೆ ಅಭಿಯಾನ ಹಾಗೂ ನೆರೆರಾಜ್ಯವಾದ ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ನಿಂದಾಗಿ ರಾಜ್ಯದ ಸರಹದ್ದು ಪ್ರವೇಶ ನಿಯಂತ್ರಿಸುವ ಕುರಿತು ಮಾರ್ಗಸೂಚಿ ಸಧ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ವಿವರಿಸಿದರು.