ಕಡಬ, : ಜೆಸಿಐ ಕಡಬ ಕದಂಬ ಹಾಗೂ ರೈತಕುಡ್ಲ ಪ್ರತಿಷ್ಠಾನದ ಆಶ್ರಯದಲ್ಲಿ ಜೂನ್ 26,27ಮತ್ತು 28ರಂದು ಕಡಬದ ಅನುಗ್ರಹ ಸಭಾಂಗಣದಲ್ಲಿ ಹಲಸು ಮೇಳ- ಕೃಷಿ ಉತ್ಸವ ಆಯೋಜಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನದ ಮುಂದಾಳು, ವಲಯ ಅಧಿಕಾರಿ ಜೇಸಿ ಸುಹಾಸ್ ಮರಿಕೆ ಅವರು ತಿಳಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕಡಬ ತಾಲೂಕು ಕೃಷಿಕ ಸಮಾಜ, ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು, ರೈತ ಉತ್ಪಾದಕ ಕಂಪನಿ ಲಿ. ಕಡಬ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಕಡಬ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಕುಟ್ರುಪ್ಪಾಡಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ನೆಲ್ಯಾಡಿ ಹಾಗೂ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂನ್ 26ರಂದು ಬೆಳಗ್ಗೆ 10.30ಕ್ಕೆ ಕಡಬದ ಹಿರಿಯ ಕೃಷಿಕ ಪಿ.ವಿಶ್ವೇಶ್ವರ ಭಟ್ ಎಲಿಯೂರು ಅವರು ಮಳಿಗೆ ಉದ್ಘಾಟಿಸುವರು. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಧರ್ಮ ಗುರು ರೆ.ಫಾ. ಪೌಲ್ ಪ್ರಕಾಶ್ ಡಿಸೋಜ, ಜಿಲ್ಲಾ ಪರಿಷತ್ತು ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಆಯುರ್ವೇದ ವೈದ್ಯರು ಮತ್ತು ಕೃಷಿಕ ಡಾ.ಸುರೇಶ್ ಕುಮಾರ್ ಕುಡೂರು, ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಉಪಸ್ಥಿತರಿರುವರು.
ಜೂನ್ 26ರಂದು ಸಾಯಂಕಾಲ ೩.೩೦ಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರು ಸಭಾ ಕರ್ಯಕ್ರಮ ಉದ್ಘಾಟಿಸಲಿದ್ದು,
ಕಡಬ ಕದಂಬ ಜೇಸಿಐ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹಲಸು ರಾಯಭಾರಿ ಶ್ರೀಪಡ್ರೆ ಅವರು ದಿಕ್ಸೂಚಿ ಭಾಷಣಗೈಯಲಿದ್ದಾರೆ.
ಕಡಬ ಪಟ್ಟಣಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಕಡಬ ಕದಂಬ ಜೆೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಉಪಸ್ಥಿತರಿರುವರು.
ಜೂನ್ 27ರಂದು ಸಾಯಂಕಾಲ 4 ಗಂಟೆಗೆ ಹಣ್ಣುಗಳೊಂದಿಗೆ ನಾವು ನೀವು- ಮಾತುಕತೆಯಲ್ಲಿ ಹಣ್ಣು ಬೆಳೆಗಾರ ಕೃಷ್ಣ ಶೆಟ್ಟಿ ಕಡಬ ಅವರು ಭಾಗವಹಿಸುವರು. ಜೂನ್ ೨೮ರಂದು ಬೆಳಗ್ಗೆ 11ಗಂಟೆಗೆ ಕಸಿ ಕಟ್ಟುವ ತರಬೇತಿಯನ್ನು ನೇತ್ರಾವತಿ ನರ್ಸರಿ ಮಾಲೀಕರಾದ ಚೇತನ್ ಅವರು ನಡೆಸಿಕೊಡಲಿದ್ದಾರೆ.
ಬಳಿಕ ಹಲಸು ಭಾರ ಎತ್ತುವ ಸ್ಪರ್ಧೆ ಹಲಸು ಬಿಡಿಸುವ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಅವರು ಮಾತನಾಡಿ ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಹಾಗೂ ರೈತರಿಗೆ ಹಲಸು ಮೌಲ್ಯವರ್ಧನೇ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಕಡೆಗಳಿಂದ ರೈತರು ಹಲಸು ಮೌಲ್ಯವರ್ದಿತ ಉತ್ಪನ್ನ ಗಳ ಮಾರಾಟ ಮಳಿಗೆ ತೆರೆಯಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಕೆಂಪು, ಬಿಳಿ, ಬಂಗಾರ ವರ್ಣದ ಹಲಸಿನ ಮಾರಾಟ ನಡೆಯಲಿದೆ. ಸಾವಯವ ಮಾದರಿಯಲ್ಲಿ ಬೆಳೆಸಿದ ವಿವಿಧ ತಳಿಗಳ ಮಾವು ಮಾರಾಟ ನೇರ ರೈತರಿಂದ ನಡೆಯಲಿದೆ.
ಕೃಷಿ ಯಂತ್ರ ಪ್ರದರ್ಶನ ಮತ್ತು ಮಾಹಿತಿ ಮಳಿಗೆ, ದೋಟಿ, ಸ್ಪ್ರೇಯರ್, ಗೊಬ್ಬರ ಮೊದಲಾದ ಅಗತ್ಯ ಕೃಷಿ ಸಲಕರಣೆಗಳ ಮಾರಾಟ, ಹಲಸಿನ ಹಪ್ಪಳ, ಚಿಪ್ಸ್, ಜಾಮ್, ಹೋಳಿಗೆ, ವಿವಿಧ ಹಣ್ಣಿನ ಐಸ್ ಕ್ರೀಂ, ಹಲಸಿನ ದೋಸೆ, ಗಟ್ಟಿ, ಸಾಂಪ್ರದಾಯಿಕ ತಿನಿಸುಗಳ ಮಾರಾಟ ಮಳಿಗೆ, ಹಣ್ಣಿನ ಸಸ್ಯಗಳು, ಹೂವಿನ ಗಿಡಗಳ ಮಾರಾಟ ವ್ಯವಸ್ಥೆ, ಸ್ವಾವಲಂಬಿ ಮಹಿಳಾ ಗೃಹೋದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ಸಾವಯವ ಸಿರಿಧಾನ್ಯ ಉತ್ಪನ್ನ, ಖಾದಿ ವಸ್ತುಗಳ ಮಾರಾಟ ಮತ್ತು ಮಾಹಿತಿ ಮಳಿಗೆಗಳು ಇರಲಿವೆ.
*ವಿಶೇಷ ಬೆಳೆ ತನ್ನಿ ಬಹುಮಾನ ಗೆಲ್ಲಿ:
ಕಡಬ ತಾಲೂಕಿನ ಕೃಷಿಕರಿಗೆ ವಿಶೇಷ ಸ್ಪರ್ಧೆ ರಏರ್ಪಡಿಸಲಾಗಿದೆ . ಕೃಷಿಕರು ಬೆಳೆದಿರುವ ಯಾವುದಾದರೂ ಬಣ್ಣ, ಆಕಾರ, ತಳಿಗಳಲ್ಲಿ ಅಪರೂಪದ ಅಥವಾ ಆಕರ್ಷಕ ಎನಿಸುವ ಬೆಳೆಗಳನ್ನು ತಂದು ಪ್ರದರ್ಶನಕ್ಕೆ ಇಡಲು ಅವಕಾಶವಿದೆ. ಒಂದು ವಿಶೇಷ ಬೆಳೆಗೆ ನಗದು ಬಹುಮಾನ ನೀಡಲಾಗುವುದು. ಪ್ರದರ್ಶನಕ್ಕೆ ಇಟ್ಟ ಬೆಳೆಯನ್ನು ರವಿವಾರ ಮಧ್ಯಾಹ್ನದ ಬಳಿಕ ಸ್ಥಳದಲ್ಲೇ ಮಾರಾಟ ಮಾಡಬಹುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ವಲಯ ಅಧಿಕಾರಿಗಳಾದ ಕಾಶೀನಾಥ್ ಗೋಗಟೆ, ವಿಶ್ರುತಾ ರಾಜೇಶ್, ಜೇಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್, ಕೃಷಲ್ ಡಿಸೋಜಾ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.


