ರಾಜ್ಯಾದ್ಯಂತ ತಾಂಡವಾಡುತ್ತಿದೆ ಭ್ರಷ್ಟಾಚಾರ: ಮುರಳೀಧರ ರೈ ಮಠಂತಬೆಟ್ಟು ಆರೋಪ
ವಿಟ್ಲ: ರಾಜ್ಯ ಸರ್ಕಾರ ಅನುದಾನ ಕೊಡುವುದಕ್ಕೆ ಗುತ್ತಿಗೆದಾರರಿಂದ ಶೇ.15ಕ್ಕೂ ಮೇಲ್ಪಟ್ಟು ವಸೂಲಿ ಮಾಡುತ್ತಿದೆ. ಕಾಂಗ್ರೆಸ್ ಮುಕ್ತವಾದರೆ ಭ್ರಷ್ಟಾಚಾರ ಮುಕ್ತ ಎಂಬ ಹೇಳಿಕೆಯನ್ನು ಹೇಳಿರುವ ಪುತ್ತೂರು ಶಾಸಕರಿಗೆ ಇದು ಗಮನದಲ್ಲಿ ಇಲ್ಲವಾ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚ ನೋಡಲ್ಲ ಎಂಬ ಗಾದೆ ಮಾತಿನಂತೆ ಬಿಜೆಪಿ ಸರ್ಕಾರದ ಪರಿಸ್ಥಿಯಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಕಾಂಗ್ರೆಸ್ ಗರಡಿಯಲ್ಲಿ ಕಷ್ಟದಲ್ಲಿರುವವರಿಗೆ, ದೀನರಿಗೆ ಸಹಾಯ ಮಾಡುವ ತರಬೇತಿಯನ್ನು ನೀಡಿದರೆ, ಬಿಜೆಪಿ ಗರಡಿಯಲ್ಲಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯಾಧ್ಯಂತ ಬ್ರಷ್ಟಾಚಾರ ತಾಂಡವವಾಡುತ್ತಿದ್ದು, ಸರಕಾರಕ್ಕೆ ಕಪ್ಪ ಕಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನದಲ್ಲಿ ತಾಲೀಬಾನ್ ಹೆಸರಿನಲ್ಲಿ ಮತ ಕೇಳುವುದು ಖಂಡಿತ, ನಮ್ಮ ದೇಶದ ಮುಸಲ್ಮಾನರನ್ನು ತಾಲೀಬಾನಿಗಳಿಗೆ ಹೋಲಿಸಿ ಮಾತನಾಡುವುದು ಖಂಡನೀಯ ಎಂದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ ಸಾಮಾಜಿಕ ಶಾಂತಿಯನ್ನು ಕದಡುವಂತ ಹೇಳಿಕೆಗಳನ್ನು ಕೊಡಲಾಗುತ್ತಿದೆ. ಕೋವಿಡ್ 19 ಹೆಸರಿನಲ್ಲಿ ಬೆಡ್ ದಂಧೆ, ಔಷಧಿ ದಂಧೆ ಹೆಸರಿನಲ್ಲಿ ಬ್ರಷ್ಟಾಚಾರ ನಡೆಸಿರುವ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡುವ ಪುತ್ತೂರು ಶಾಸಕರ ಹೇಳಿಕೆ ಖಂಡನೀಯ ಎಂದು ತಿಳಿಸಿದರು.
ಪುತ್ತೂರು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ದ. ಕ. ಅಲ್ಪ ಸಂಖ್ಯಾತ ಘಟಕದ ಸಂಚಾಲಕ ಅಶೋಕ್ ಡಿಸೋಜ ಉಪಸ್ಥಿತರಿದ್ದರು.