ವಿಟ್ಲದ ಇಡ್ಕಿದು ಎಂಬಲ್ಲಿ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು
ವಿಟ್ಲ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರರೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ
ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ ದುರ್ದೈವಿ. ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು ತರುತ್ತಿದ್ದವೇಳೆ ಮಿತ್ತೂರು ಮಸೀದಿ ಸಮೀಪದದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸಹಿತ ಸುರೇಶ್ ರವರು ಬಿದ್ದಿರುವುದನ್ನು ನೋಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಶ್ ರವರನ್ನು ಕೂಡಲೇ ಆ ದಾರಿಯಾಗಿ ಬಂದ ವಾಹನದ ಮೂಲಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಆಪಘಾತ ನಡೆದ ವೇಳೆ ಯಾರೂ ನೋಡದಿರುವ ಹಿನ್ನೆಲೆಯಲ್ಲಿ ಘಟನೆ ಹೇಗೆ ನಡೆದಿದೆ ಎನ್ನುವ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.